ಇಂದಿನಿಂದ ಎರಡು ದಿನಗಳ ಅರಬ್ ರಾಷ್ಟ್ರಗಳಿಗೆ ಪ್ರವಾಸ ಕೈಗೊಳ್ಳುತ್ತಿರುವ ಪ್ರಧಾನಿ ಮೋದಿ ಅವರು ಪ್ರವಾಸದ ವೇಳೆ ಭಯೋತ್ಪಾದನೆ ಕುರಿತಾಗಿ ಚರ್ಚೆ ನಡೆಸಲಿದ್ದು ಅದರಲ್ಲಿಯೂ ಪ್ರಮುಖವಾಗಿ ಭೂಗತ ಪಾತಕಿ ದಾವುದ್ ಇಬ್ರಾಹಿಂ ಕುರಿತಾಗಿ ಮಾತುಕತೆ ನಡೆಸುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಕಳೆದ ಕೆಲವು ದಿನಗಳ ಹಿಂದಷ್ಟೇ ಲೋಕಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದರು. ಅಲ್ಲದೇ ಈ ಸಮಯದಲ್ಲಿ ಪಾಕಿಸ್ತಾನದಲ್ಲಿರುವ ದಾವುದ್ ದುಬೈನಲ್ಲಿರುವ ಜಾವೇದ್ ಎಂಬಾತನ ಕರೆ ಟ್ರೇಸ್ ಮಾಡಲಾಗಿದ್ದು ಈ ಸಮಯದಲ್ಲಿ ದಾವುದ್ , ಜಾವೇದ್ ಸಹಕಾರದೊಂದಿಗೆ ದುಬೈನಲ್ಲಿ ಹಲವು ವ್ಯವಹಾರಗಳನ್ನು ನಡೆಸುತ್ತಿದ್ದಾನೆ ಎಂಬ ಅಂಶ ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದರು.
ಹಾಗಾಗಿ ಆಲ್ ಖೈದಾ ಜತೆ ಸಂಪರ್ಕ ಹೊಂದಿರುವ ದಾವುದ್ ಇಬ್ರಾಹಿಂ ಗೆ ಸಂಬಂಧಿಸಿದಂತೆ ಅರಬ್ ಪ್ರವಾಸದಲ್ಲಿರುವ ಮೋದಿ ಮಾತುಕತೆ ನಡೆಸುವ ಸಾಧ್ಯತೆ ಇದ್ದು ದಾವುದ್ ನನ್ನು ಭಾರತಕ್ಕೆ ಕರೆ ತರಲು ಸಹಕರಿಸುವಂತೆ ಮನವಿ ಮಾಡಲಿದ್ದಾರೆ ಎನ್ನಲಾಗುತ್ತಿದೆ.