ದಮಾಮ್: ಇಂಡಿಯನ್ ಸೋಶಿಯಲ್ ಫೋರಮ್ ಕರ್ನಾಟಕ ರಾಜ್ಯ ಘಟಕದ ವತಿಯಿಂದ ಸೌದಿಅರೇಬಿಯದ ಈಸ್ಟರ್ನ್ ಪ್ರೊವಿನ್ಸ್ ನಗರಗಳಲ್ಲಿ ಭಾರತದ ಸ್ವಾತಂತ್ರ್ಯ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡಾಕೂಟ, ಪ್ರಹಸನ, ಸಭಾ ಕಾರ್ಯಕ್ರಮಗಳ ಮೂಲಕ ಅನಿವಾಸಿ ಭಾರತೀಯರು ಸಂಭ್ರಮದಿಂದ ಸ್ವಾತಂತ್ರ್ಯ ದಿನ ಆಚರಿಸಲು ವೇದಿಕೆ ಕಲ್ಪಿಸಲಾಯಿತು.
ಆಗಸ್ಟ್ 1 5 ರಂದು ಸಂಜೆ ದಮಾಮ್ ನ ರೋಸ್ ರೆಸ್ಟೋರೆಂಟ್ ಸಭಾಂಗಣದಲ್ಲಿ ಇಂಡಿಯನ್ ಸೋಶಿಯಲ್ ಫೋರಮ್ ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಇಂಡಿಯನ್ ಸೋಶಿಯಲ್ ಫೋರಮ್ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಫಯಾಜ಼್ ಎನ್. ಅವರು, ಅನಿವಾಸಿ ಭಾರತೀಯರಾಗಿದ್ದುಕೊಂಡು ದೇಶದ ಸಾರ್ವಭೌಮತೆಯನ್ನು ಎತ್ತಿಹಿಡಿಯುವಲ್ಲಿ ಸದಾ ಕಾಲ ನಾವು ಕಟಿ ಬದ್ಧರಾಗಿರಬೇಕಾಗಿದೆ. ಸ್ವಾತಂತ್ರ್ಯ ದಿನವನ್ನು ಕೇವಲ ಒಂದು ದಿನದ ಸಂಭ್ರಮಕ್ಕೆ ಮಾತ್ರ ಸೀಮಿತವಾಗಿರಿಸದೆ ಭಾರತದ ಸರ್ವಶ್ರೇಷ್ಠ ಪ್ರಜಾತಂತ್ರ ವ್ಯವಸ್ಥೆಯನ್ನು ಉಳಿಸಿಕೊಳ್ಳುವುದಕ್ಕೆ ಮುನ್ನುಡಿಯಾಗಿ ಸ್ವೀಕರಿಸಬೇಕಾಗಿದೆ ಎಂದು ಕರೆ ನೀಡಿದರು.
ಪ್ರಜಾತಂತ್ರ ವ್ಯವಸ್ಥೆಗೆ ಧಕ್ಕೆ ಉಂಟಾಗುವಂತಹ ಕೆಲಸ ಕಾರ್ಯಗಳು, ಯೋಜನೆಗಳು, ಸಿದ್ಧಾಂತಗಳು ಭಾರತದಲ್ಲಿ ವ್ಯಾಪಕಗೊಳ್ಳುತ್ತಿದ್ದು, ಇದು ಎಚ್ಚರಿಕೆಯ ಕರೆಗಂಟೆಯಾಗಿದೆ. ದೇಶದ ಜಾತ್ಯತೀತ ಪರಂಪರೆಯನ್ನು ಉಳಿಸುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದು ಫಯಾಜ಼್ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಂಗಳೂರು ಅಸೋಸಿಯೇಶನ್ ಅಧ್ಯಕ್ಷ ನರೇಂದ್ರ ಶೆಟ್ಟಿ, ಹಿದಾಯ ಫೌಂಡೇಶನ್ ದಮಾಮ್ ಘಟಕದ ಉಪಾಧ್ಯಕ್ಷ ಅನ್ವರ್ ಸಾದತ್, ಇಂಡಿಯಾ ಫ್ರೆಟರ್ನಿಟಿ ಫೋರಮ್ ಈಸ್ಟರ್ನ್ ಪ್ರೊವಿನ್ಸ್ ರೀಜಿನಲ್ ಸಮಿತಿಯ ಅಧ್ಯಕ್ಷ ಅಬ್ದುಲ್ಲಾ ಕುಟ್ಯಾಡಿ ಸ್ವಾತಂತ್ರ್ಯದ ಶುಭಾಶಯಗಳನ್ನು ಸಲ್ಲಿಸಿದರು.
ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಗಸ್ಟ್ 14ರಂದು ನಡೆದ ಇಂಡಿಪೆಂಡೆನ್ಸ್ ಕಪ್ ಕ್ರಿಕೆಟ್ ಪಂದ್ಯಾವಳಿಯ ವಿಜೇತರಿಗೆ ಇದೇ ಸಂದರ್ಭದಲ್ಲಿ ಪ್ರಶಸ್ತಿ ವಿತರಿಸಲಾಯಿತು. ಚಾಂಪಿಯನ್ ಆಗಿ ಮೂಡಿಬಂದ ಈಸ್ಟರ್ನ್ ಬ್ಲೂ ಕ್ರಿಕೆಟರ್ಸ್ ತಂಡಕ್ಕೆ ಫಯಾಜ಼್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ರನ್ನರ್ ಅಪ್ ಪ್ರಶಸ್ತಿಯನ್ನು ಸ್ಟಾರ್ ಕ್ರಿಕೆಟರ್ಸ್ ಕೃಷ್ಠಾಪುರ ತಂಡವು ಪಡೆದುಕೊಂಡಿತು. ವೈಯಕ್ತಿಕ ಅತ್ಯುತ್ತಮ ಬ್ಯಾಟ್ಸ್ಮ್ಯಾನ್ ಆಗಿ ಮಾಸ್ಟರ್ಸ್ ತಂಡದ ಸಯೀದ್ ಕಾಟಿಪಳ್ಳ, ಅತ್ಯುತ್ತಮ ಬೌಲರ್ ಆಗಿ ಹನೀಫ್ ಸ್ಟಾರ್ ಕ್ರಿಕೆಟರ್ಸ್ ಹಾಗೂ ಪಂದ್ಯಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಈಸ್ಟರ್ನ್ ಬ್ಲೂ ಕ್ರಿಕೆಟರ್ಸ್ ತಂಡದ ಸರ್ಫ್ರಾಜ಼್ ಅವರು ಪಡೆದುಕೊಂಡರು.
ಇಂಡಿಯನ್ ಸೋಶಿಯಲ್ ಫೋರಮ್ ಉಡುಪಿ ಜಿಲ್ಲಾ ಸಮಿತಿ ಅಧ್ಯಕ್ಷ ಸಲೀಮ್ ಉಡುಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯ ನಝ್ರುಲ್ಲಾ ಖಾನ್ ಸ್ವಾಗತಿಸಿದರು. ರವೂಫ್ ಹಾಗೂ ಖಾಲಿದ್ ಬಂಟ್ವಾಳ ಅವರು ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಅಬ್ದುಲ್ ರಹ್ಮಾನ್ ಅವರು ಧನ್ಯವಾದ ಸಲ್ಲಿಸಿದರು. ಸಭಾ ಕಾರ್ಯಕ್ರಮಕ್ಕೆ ಮುನ್ನ ಮಕ್ಕಳಿಂದ ದೇಶಭಕ್ತಿ ಗೀತೆ ಹಾಗೂ ಸಾರ್ವಜನಿಕರಿಗೆ ರಸ ಪ್ರಶ್ನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಅಲ್ ಖೋಬರ್: ಇಂಡಿಯನ್ ಸೋಶಿಯಲ್ ಫೋರಮ್ ದ.ಕ.ಜಿಲ್ಲಾ ಸಮಿತಿಯ ವತಿಯಿಂದ ಅಲ್ ಖೋಬರ್ನ ಅಫ್ಸರಾ ಆಡಿಟೋರಿಯಮ್ ನಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸಭಾಧ್ಯಕ್ಷತೆ ವಹಿಸಿದ್ದ ಇಂಡಿಯನ್ ಸೋಶಿಯಲ್ ಫೋರಮ್ ನ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ಎಂ.ಆರಿಫ್ ಅವರು ಮಾತನಾಡಿ, ಕಳೆದ 68 ವರ್ಷಗಳಿಂದ ಸ್ವಾತಂತ್ರೃದ ಮೂಲ ಆಶಯವಾಗಿರುವ ಸಾಮಾಜಿಕ ನ್ಯಾಯವನ್ನು ಸಂಪೂರ್ಣವಾಗಿ ಪ್ರತಿಷ್ಠಾಪಿಸುವಲ್ಲಿ ನಮ್ಮ ಆಡಳಿತ ವ್ಯವಸ್ಥೆ ವಿಫಲವಾಗಿದೆ. ಇಂತಹ ಸಂದರ್ಭದಲ್ಲಿ ಅದರ ವಿರುದ್ಧ ದನಿಯೆತ್ತುವುದು, ಹಕ್ಕುಗಳಿಗಾಗಿ ಹೋರಾಟ ನಡೆಸುವುದು ಪ್ರಜ್ಞಾವಂತ ನಾಗರಿಕನ ಕರ್ತವ್ಯವಾಗಿದೆ ಎಂದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಜಮೀಯ್ಯತುಲ್ ಫಲಾಹ್ ದಮಾಮ್ ಉಪಾಧ್ಯಕ್ಷ ಇಮ್ರಾನ್ ಕಾರ್ಕಳ, ಬಿಜಾಪುರ ಅಸೋಸಿಯೇಶನ್ ಬಂದೇ ನವಾಜ಼್, ಮಲೆನಾಡು ಅಸೋಸಿಯೇಶನ್ ನ ಸಿರಾಜ಼್, ಇಂಡಿಯ ಫ್ರೆಟರ್ನಿಟಿ ಫೋರಮ್ ಖೋಬರ್ ಅಧ್ಯಕ್ಷ ಅಹ್ಮದ್ ಬಶೀರ್ ಮುಂತಾದವರು ಉಪಸ್ಥಿತರಿದ್ದರು.
ಸೋಶಿಯಲ್ ಫೋರಮ್ ದ.ಕ.ಜಿಲ್ಲಾ ಸಮಿತಿಯ ಅಧ್ಯಕ್ಷ ಸಿದ್ದೀಕ್ ನಂದರಬೆಟ್ಟು ಪ್ರಾಸ್ತಾವಿಕ ಮತ್ತು ಸ್ವಾಗತವನ್ನು ಕೋರಿದರು. ಸದಸ್ಯ ರಫೀಕ್ ಉಚ್ಚಿಲ ಧನ್ಯವಾದ ಸಲ್ಲಿಸಿದರು. ಮುಹಮ್ಮದ್ ನಿಸಾಫ್ ಅವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ಸೋಶಿಯಲ್ ಫೋರಮ್ ಕಾರ್ಯಕರ್ತರು ಪ್ರದರ್ಶಿಸಿದ ಪ್ರಹಸನವು ಸಭಿಕರಲ್ಲಿ ದೇಶಪ್ರೇಮ ಮತ್ತು ಐಕ್ಯತೆಯ ಸಂಚಲನ ಮೂಡಿಸಿತು. ಸಭಿಕರಿಗೆ ರಸಪ್ರಶ್ನೆ ಹಾಗೂ ವಿನೋದ ಚಟುವಟಿಕೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು.
ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸಾರ್ವಜನಿಕರೆಲ್ಲರಿಗೂ ಸಿಹಿತಿಂಡಿ ಹಾಗೂ ಊಟದ ವ್ಯವಸ್ಥೆಯನ್ನು ಏರ್ಪಡಿಸಿದ್ದು, ಅನಿವಾಸಿ ಭಾರತೀಯರಲ್ಲಿ ಸ್ವಾತಂತ್ರ್ಯೋತ್ಸವ ವಾತಾವರಣವನ್ನು ನಿರ್ಮಿಸುವಲ್ಲಿ ಇಂಡಿಯನ್ ಸೋಶಿಯಲ್ ಫೋರಮ್ ಯಶಸ್ವಿಯಾಯಿತು. ಅಲ್ಲದೆ ಜುಬೈಲ್, ಅಲ್ ಹಸ ಮುಂತಾದ ಈಸ್ಟರ್ನ್ ಪ್ರೊವಿನ್ಸ್ ನ ಇತರ ಕಡೆಗಳಲ್ಲಿಯೂ ಇಂಡಿಯನ್ ಸೋಶಿಯಲ್ ಫೋರಮ್ ವತಿಯಿಂದ ಕ್ರೀಡಕೂಟವನ್ನು ಏರ್ಪಡಿಸಲಾಗಿದೆ.