ಪಾಲ್ಘಾರ್: ಮಹಾರಾಷ್ಟ್ರದ ಪಾಲ್ಘಾರ್ ನಲ್ಲಿ ತನ್ನ ದೇಹದಲ್ಲಿ ‘ಪ್ರೇತಾತ್ಮ’ ಹೊಂದಿದ್ದಾಳೆ ಎಂದು ದೂರಿ ೪೦ ವರ್ಷದ ಮಹಿಳೆಯನ್ನು ಮೂರು ಜನ ಗ್ರಾಮಸ್ಥರು ಕೊಂದ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮ್ಯಾನರ್ ನಗರದ ನೈನ್ ಗ್ರಾಮದ ನಿವಾಸಿ ಸವಿತಾ ನರೇಶ್ ಗೋಲಿಮ್ ಮತ್ತು ಆರೋಪಿಗಳಿಗೆ ಗ್ರಾಮದ ಪಿತ್ರಾರ್ಜಿತ ಆಸ್ತಿಯ ಬಗ್ಗೆ ವಿವಾದವಿತ್ತು ಎಂದು ಕೂಡ ತಿಳಿಯಲಾಗಿದೆ. ಆರೋಪಿ ವ್ಯಕ್ತಿಗಳ ಹೆಸರುಗಳನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಆದರೆ ಆರೋಪಿಗಳು ಮಹಿಳೆಯ ದೇಹದಲ್ಲಿ ದೆವ್ವ ಹೊಕ್ಕಿದ್ದಾಗಿ ನಂಬಿದ್ದರು ಎಂದು ಮ್ಯಾನರ್ ಪೊಲೀಸ್ ಠಾಣೆಯ ಸಬ ಇನ್ಸ್ಪೆಕ್ಟರ್ ಆರ್ ಎ ಬೋರ್ ತಿಳಿಸಿದ್ದಾರೆ.
ನೆನ್ನೆ ಮಧ್ಯಾಹ್ನ ಮಹಿಳೆಯ ಮನೆ ಹೊಕ್ಕ ಮೂವರು ಪುರುಷರು ಮರದ ದಿಮ್ಮಿಯಿಂದ ಮಹಿಳೆಯ ಮೇಲೆ ದಾಳಿ ಮಾಡಿ ಅವಳನ್ನು ಸ್ಥಳದಲ್ಲೇ ಕೊಂದಿದ್ದಾರೆ ಎಂದು ಬೋರ್ ತಿಳಿಸಿದ್ದಾರೆ. ನಂತರ ಈ ಮೂವರು, ಮಹಿಳೆಯ ದೇಹವನ್ನು ಮನೆಯ ಹತ್ತಿರದ ಸಗಣಿ ತಿಪ್ಪೆಗೆ ಎಸೆದಿದ್ದಾರೆ.
ಐಪಿಸಿ 302(ಕೊಲೆ), 452(ಅನಧಿಕೃತ ಪ್ರವೇಶ) ಕಾಯ್ದೆಗಳಡಿ ಈ ಮೂವರ ಮೇಲೆ ಪೊಲೀಸರು ಕೇಸು ದಾಖಲಿಸಿದ್ದು, ಈ ಮೂವರು ಆರೋಪಿಗಳಿಗೆ ಹುಡುಕಾಟ ನಡೆಸಿದ್ದಾರೆ.