ವಾಶಿಂಗ್ಟನ್, ಆ. 22: ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಹಾಗೂ ಅವರ ರಾಷ್ಟ್ರೀಯ ಭದ್ರತಾ ಸಲಹಾಕಾರರ ನಡವಿನ ಹಾಟ್ಲೈನ್ಗಳು ಇತ್ತೀಚೆಗೆ ಸಿದ್ಧಗೊಂಡಿವೆ. ಆದರೆ, ಅವುಗಳನ್ನು ಈವರೆಗೆ ಬಳಸಿಕೊಳ್ಳಲಾಗಿಲ್ಲ.
‘‘ಹಾಟ್ಲೈನ್ಗಳನ್ನು ಇತ್ತೀಚೆಗಷ್ಟೇ ಸ್ಥಾಪಿಸಲಾಗಿದೆ’’ ಎಂದು ಅಮೆರಿಕದ ಅಧ್ಯಕ್ಷರ ವಿಶೇಷ ಸಹಾಯಕ ಹಾಗೂ ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ದಕ್ಷಿಣ ಏಶ್ಯ ವ್ಯವಹಾರಗಳ ಹಿರಿಯ ನಿರ್ದೇಶಕ ಪೀಟರ್ ಆರ್. ಲ್ಯಾವಾಯ್ ಪಿಟಿಐಗೆ ತಿಳಿಸಿದರು.
ಸುರಕ್ಷಾ ಸಂವಹನ ವ್ಯವಸ್ಥೆಯ ಆಧುನಿಕ ಉಪಕರಣವನ್ನು ಉಭಯ ನಾಯಕರು ಈವರೆಗೆ ಬಳಸಿದ್ದಾರೆಯೇ ಎಂಬ ಪ್ರಶ್ನೆಗೆ, ‘‘ಅದನ್ನು ಈವರೆಗೆ ಬಳಸಲಾಗಿಲ್ಲ’’ ಎಂದುತ್ತರಿಸಿದರು.
ಜನವರಿ 26ರ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲು ಭಾರತಕ್ಕೆ ಒಬಾಮ ಭೇಟಿ ನೀಡಿದ್ದ ವೇಳೆ, ಒಬಾಮ-ಮೋದಿ ನಡುವೆ ಹಾಟ್ಲೈನ್ ಸ್ಥಾಪಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು.
ಇದರೊಂದಿಗೆ ಅಮೆರಿಕದೊಂದಿಗೆ ಹಾಟ್ಲೈನ್ ಹೊಂದಿರುವ ನಾಲ್ಕನೆ ದೇಶ ಭಾರತವಾಗಿದೆ. ರಶ್ಯ, ಗ್ರೇಟ್ ಬ್ರಿಟನ್ ಮತ್ತು ಚೀನಾಗಳು ಈಗಾಗಲೇ ಅಮೆರಿಕದೊಂದಿಗೆ ಹಾಟ್ಲೈನ್ ಹೊಂದಿವೆ.
ದೇಶದ ಮುಖ್ಯಸ್ಥರ ಮಟ್ಟದಲ್ಲಿ ಭಾರತ ಹಾಟ್ಲೈನ್ ಸಂಪರ್ಕ ಹೊಂದುತ್ತಿರುವುದು ಇದೇ ಪ್ರಥಮವಾಗಿದೆ.