ದೇಶ ಸುತ್ತು ಇಲ್ಲವೇ, ಕೋಶ ಓದು ಎಂಬುದು ಗಾದೆ ಮಾತು, ಇಂದು ಬಹುತೇಕರು ಉದ್ಯೋಗ, ಪ್ರವಾಸ ಸೇರಿದಂತೆ ವಿವಿಧ ಕಾರಣಗಳಿಗೆ ವಿದೇಶಕ್ಕೆ ಹೋಗುವುದು ಸಾಮಾನ್ಯ. ಹಾಗೆ ಹೋಗುವ ಸಂದರ್ಭದಲ್ಲಿ ಅನುಸರಿಸಬೆಕಾದ ಕೆಲವು ಸೂಚನೆ ಇಲ್ಲಿವೆ.
ಪ್ರಪಂಚವನ್ನು ಸುತ್ತಬೇಕೆಂಬ ಆಸೆ ಸಹಜ. ವಿಭಿನ್ನ ಜಾಗ, ಪರಿಸರ, ಸ್ಮಾರಕಗಳು ಕಲೆ, ಸಂಸ್ಕೃತಿ, ಭಾಷೆ ನೋಡುವುದು, ಅದರ ಬಗ್ಗೆ ತಿಳಿದುಕೊಳ್ಳುವ ಬಗ್ಗೆ ಆಸಕ್ತಿ ಕೂಡ ಇರುತ್ತದೆ. ಮೊದಲ ಸಲ ವಿದೇಶ ಪ್ರಯಾಣ ಮಾಡುವವರು ಮೊದಲೇ ಸಿದ್ಧತೆ ಮಾಡಿಕೊಂಡರೆ ಚೆನ್ನ. ಇಲ್ಲವಾದರೆ, ನೀವು ತೊಂದರೆ ಅನುಭವಿಸಿ ಕಷ್ಟ ಪಡಬೇಕಾದೀತು. ವಿದೇಶ ಪ್ರಯಾಣಕ್ಕೆ ಪಾಸ್ ಪೋರ್ಟ್ ಮತ್ತು ವೀಸಾ ಅಗತ್ಯವಾಗಿ ಇರಬೇಕು. ಅದನ್ನು ಮರೆಯದೇ ತೆಗೆದುಕೊಂಡು ಹೋಗಬೇಕು. ಅದರಲ್ಲಿ ನಿಮ್ಮ ಸಹಿ ಇರಬೇಕು. ನೀವು ಹೊರಡುವ ಮೊದಲು ಪಾಸ್ ಪೋರ್ಟ್ ನ ತುರ್ತು ಮಾಹಿತಿ ಅರ್ಜಿಯನ್ನು ಭರ್ತಿ ಮಾಡಬೇಕು. ನೀವು ಹೋಗಲಿರುವ ದೇಶದ ಕಾನ್ ಸ್ಯುಲರ್ ಮಾಹಿತಿಯನ್ನು ಓದಿ ತಿಳಿದುಕೊಳ್ಳಬೇಕು. ಆ ದೇಶದ ಕಾನೂನು ನೀತಿ, ನಿಯಮಗಳು ಪದ್ಧತಿಗಳ ಬಗ್ಗೆ ಅರಿಯುವುದು ಒಳ್ಳೆಯದು. ನಿಮ್ಮ ಪಾಸ್ ಪೋರ್ಟ್ ಗುರುತಿನ ಪತ್ರವನ್ನು ಎರಡು ಕಾಪಿ ಮಾಡಿಟ್ಟುಕೊಳ್ಳಿ. ಒಂದನ್ನು ನಿಮ್ಮ ಗೆಳೆಯರು ಅಥವಾ ಸಂಬಂಧಿಕರ ಬಳಿ ಇಟ್ಟುಕೊಳ್ಳಲು ಕೊಡಿ, ಮತ್ತೊಂದು ನಿಮ್ಮ ಬಳಿ ಇರಲಿ, ಆಕಸ್ಮಾತ್ ಪಾಸ್ ಪೋರ್ಟ್ ಕಳೆದು ಹೋದಾಗ ಅನುಕೂಲವಾಗುತ್ತದೆ.
ನೀವು ಪ್ರಯಾಣಿಸಲಿರುವ ಮಾರ್ಗದ ಪಟ್ಟಿ ಮಾಹಿತಿಯನ್ನು ನಿಮ್ಮ ಕುಟುಂಬದವರಿಗೆ ಅಥವಾ ಗೆಳೆಯರಿಗೆ ಕೊಡಿ. ಒಂದು ವೇಳೆ ತುರ್ತು ಸಮಸ್ಯೆ ಬಂದರೆ ನಿಮ್ಮನ್ನು ಅವರು ಸಂಪರ್ಕಿಸಲು ಅನುಕೂಲವಾಗುತ್ತದೆ. ನೀವು ಸಾರ್ವಜನಿಕ ಸ್ಥಳದಲ್ಲಿ ಇರುವಾಗ ನಿಮ್ಮ ಲಗೇಜ್ ಗಳನ್ನು ಬಿಟ್ಟು ಎಲ್ಲೂ ಹೋಗಬೇಡಿ, ಎಲ್ಲರಿಗಿಂತ ಎದ್ದು ಕಾಣುವಂತಹ ದುಬಾರಿ ಬೆಲೆ ಬಾಳುವ ಬಟ್ಟೆ, ಆಭರಣ ಧರಿಸಬೇಡಿ, ಅಗತ್ಯಕ್ಕಿಂತ ಹೆಚ್ಚಿನ ಹಣ ಹಾಗೂ ಕ್ರೆಡಿಟ್ ಕಾರ್ಡ್ ಗಳನ್ನು ತೆಗೆದುಕೊಂಡು ಹೋಗುವುದನ್ನು ಬಿಡಿ. ಆಯಾ ದೇಶದಲ್ಲಿ ಇರುವಾಗ ಸ್ಥಳೀಯ ಕಾನೂನು ಉಲ್ಲಂಘಿಸಬಾರದು. ಯಾವುದೇ ತೊಂದರೆಯಾದಾಗ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ.