ನವದೆಹಲಿ: ಟ್ರಾಫಿಕ್ ಸಿಗ್ನಲ್ ನಲ್ಲಿ ಯುವಕನೊಬ್ಬ ತನ್ನನ್ನು ನಿಂದಿಸಿದನೆಂದು ಆರೋಪಿಸಿ ಯುವತಿಯೊಬ್ಬರು ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ಆತನ ಫೋಟೋ ಪೋಸ್ಟ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನ ತಾಯಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಆಕೆ ಪ್ರಚಾರಕ್ಕಾಗಿ ಈ ರೀತಿ ಮಾಡಿದ್ದಾಳೆಂದು ಆರೋಪಿಸಿದ್ದಾರೆ.
ಭಾನುವಾರ ರಾತ್ರಿ 8-30 ರ ಸುಮಾರಿಗೆ ತಮ್ಮ ಪುತ್ರ ಸರಬ್ಜಿತ್ ಸಿಂಗ್ ನವದೆಹಲಿಯ ತಿಲಕ್ ನಗರದ ಟ್ರಾಫಿಕ್ ಸಿಗ್ನಲ್ ನಲ್ಲಿ ಬೈಕ್ ನಿಲ್ಲಿಸಿಕೊಂಡಿದ್ದ ವೇಳೆ ಅಲ್ಲಿಯೇ ಇದ್ದ ಯುವತಿ ತಾನು ಆಮ್ ಆದ್ಮಿ ಪಕ್ಷದ ಮುಖಂಡೆ ಎಂದು ಹೇಳಿಕೊಂಡಿದ್ದಾಳೆ. ಟ್ರಾಫಿಕ್ ನಿಯಮಾವಳಿಗಳನ್ನು ತಿಳಿಸುತ್ತಿರುವುದಾಗಿ ಆಕೆ ಹೇಳಿದ್ದು, ಅಷ್ಟರಲ್ಲೇ ಹಸಿರು ದೀಪ ಬಿದ್ದ ಕಾರಣ ತಮ್ಮ ಪುತ್ರ ಬೈಕ್ ಸ್ಟಾರ್ಟ್ ಮಾಡಿಕೊಂಡು ಹೊರಟಿದ್ದಾನೆ. ಆಗ ಆಕೆ ತನ್ನ ಮೊಬೈಲಿನಲ್ಲಿ ತಮ್ಮ ಪುತ್ರನ ಫೋಟೋ ತೆಗೆದುಕೊಂಡಿದ್ದಾಳೆಂದು ತಿಳಿಸಿದ್ದಾರೆ.
ಮನೆಗೆ ಬಂದ ವೇಳೆ ತಮ್ಮ ಪುತ್ರ ನಡೆದ ವಿಷಯವನ್ನೆಲ್ಲಾ ಹೇಳಿದ್ದು, ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ತಮ್ಮ ಪುತ್ರನ ಫೋಟೋ ನೋಡಿದ ಬಳಿಕವೇ ಆಕೆಯ ಹೆಸರು ಜಸ್ಲೀನ್ ಕೌರ್ ಎಂದು ತಿಳಿದುಬಂದಿದ್ದಾಗಿ ಸರಬ್ಸಿತ್ ಸಿಂಗ್ ತಾಯಿ ತಿಳಿಸಿದ್ದಾರೆ. ವೈಯಕ್ತಿಕವಾಗಿ ತಮ್ಮ ಕುಟುಂಬಕ್ಕೆ ಜಸ್ಲೀನ್ ಕೌರ್ ಯಾರೆಂಬುದೇ ಗೊತ್ತಿಲ್ಲ. ಆದರೆ ಆಕೆ ಮಾಡುತ್ತಿರುವುದು ಕೇವಲ ಪ್ರಚಾರಕ್ಕಾಗಿ ಎಂದು ಹೇಳಿರುವ ಅವರು, ಇದರಿಂದಾಗಿ ತಮ್ಮ ಮಗನಿಗೆ ಕೆಟ್ಟ ಹೆಸರು ಬರುವಂತಾಗಿದೆ ಎಂದು ತಮ್ಮ ನೋವು ತೋಡಿಕೊಂಡಿದ್ದಾರೆ.