ಗೌಹಾತಿ: ಸುದ್ದಿ ವಾಹಿನಿಯೊಂದು ಶಾರ್ಟ್ಸ್ ಹಾಗೂ ಟೀ ಶರ್ಟ್ ಧರಿಸುವ ಯುವತಿಯರನ್ನು ಮಂಗನಿಗೆ ಹೋಲಿಕೆ ಮಾಡಿದ ನ್ಯೂಸ್ ಕ್ಲಿಪ್ ಪ್ರಸಾರ ಮಾಡಿದ್ದು, ಅದೀಗ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆಯಲ್ಲದೇ ಇದನ್ನು ಪ್ರಸಾರ ಮಾಡಿದ ವಾಹಿನಿ ವಿರುದ್ದ ಪ್ರತಿಭಟನೆ ನಡೆಸಿರುವ ಘಟನೆಯೂ ನಡೆದಿದೆ.
ಅಸ್ಸಾಮಿ ನ್ಯೂಸ್ ಚಾನೆಲ್ ‘ಪ್ರತಿದಿನ್ ಟೈಮ್’ ಈ ಕಾರ್ಯಕ್ರಮವನ್ನು ಪ್ರಸಾರ ಮಾಡಿದ್ದು, ಅಸ್ಸಾಮಿ ಭಾಷೆಯ ಹಿನ್ನೆಲೆ ಧ್ವನಿಯೊಂದಿಗೆ ಗೌಹಾತಿ ರಸ್ತೆಯಲ್ಲಿ ಶಾರ್ಟ್ಸ್ ಹಾಗೂ ಟೀ ಶರ್ಟ್ ಧರಿಸಿ ಅಡ್ಡಾಡುತ್ತಿರುವ ಯುವತಿಯರ ವಿಡಿಯೋವನ್ನೂ ಪ್ರಸಾರ ಮಾಡಿದೆ. ಇದು ಈಗ ವಿವಾದಕ್ಕೆ ಕಾರಣವಾಗಿದ್ದು, ಪೊಲೀಸರಿಗಿಂತ ಸುದ್ದಿ ವಾಹಿನಿಯವರೇ ಡೇಂಜರ್. ಪೊಲೀಸರಿಗಿಂತ ಜಾಸ್ತಿ ಅವರಿಗೆ ನಾವು ಭಯಪಡಬೇಕಿದೆ ಎಂದು ಆನೇಕರು ಹೇಳಿದ್ದಾರೆ. ಸುದ್ದಿ ವಾಹಿನಿಯವರು ಎಲ್ಲಿ ಯಾವಾಗ ನಮ್ಮ ದೃಶ್ಯಗಳನ್ನು ಸೆರೆ ಹಿಡಿದು ಮಾನ ಹರಾಜು ಮಾಡುತ್ತಾರೋ ಎಂದು ಭಯಪಡಬೇಕಿದೆ ಎಂದು ಅವರುಗಳು ತಿಳಿಸಿದ್ದಾರೆ.
ಸುದ್ದಿ ವಾಹಿನಿ ವಿರುದ್ದ ಭಾನುವಾರದಂದು ಪ್ರತಿಭಟನೆ ನಡೆದಿದ್ದು, ಪ್ರತಿಭಟನಾಕಾರರನ್ನು ಬಂಧಿಸಿರುವ ಪೊಲೀಸರು ಅವರುಗಳ ವಿರುದ್ದ ಕರ್ಪ್ಯೂ ಉಲ್ಲಂಘನೆ ಪ್ರಕರಣ ದಾಖಲಿಸಿರುವುದೂ ಅಕ್ರೋಶದ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಂತಾಗಿದೆ. ಕರ್ಪ್ಯೂ ಹಾಕಿರದಿದ್ದರೂ ಪೊಲೀಸರು ಆ ಹೆಸರಿನಲ್ಲಿ ಪ್ರಕರಣ ದಾಖಲಿಸುವ ಮೂಲಕ ಹೋರಾಟವನ್ನು ಹತ್ತಿಕ್ಕುವ ಯತ್ನ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ. ಈ ಮಧ್ಯೆ ತಮ್ಮ ವಾಹಿನಿಯಲ್ಲಿ ಪ್ರಸಾರವಾದ ಕಾರ್ಯಕ್ರಮದ ಕುರಿತು ಕ್ಷಮೆ ಯಾಚಿಸಿರುವ ವಾಹಿನಿ ಮುಖ್ಯಸ್ಥ ನಿತುಮೋನಿ ಸೈಕಿಯಾ, ವರದಿಗಾರರ ಅಚಾತುರ್ಯದಿಂದ ಈ ಕಾರ್ಯಕ್ರಮ ಪ್ರಸಾರವಾಗುವಂತಾಗಿದೆ ಎಂದು ತಿಳಿಸಿದ್ದಾರಲ್ಲದೇ ಆ ವರದಿಗಾರರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.