ಹೊಸದಿಲ್ಲಿ : ಸಮಾನ ಹುದ್ದೆ, ಸಮಾನ ಪಿಂಚಣಿ ವೇತನ ಜಾರಿಗೆ ಆಗ್ರಹಿಸಿ ನಿವೃತ್ತ ಯೋಧರು ನಡೆಸುತ್ತಿರುವ ಉಗ್ರ ಪ್ರತಿಭಟನೆ ಇತ್ಯರ್ಥಕ್ಕೆ ಸರಕಾರ ನಡೆಸಿದ ಎರಡೂ ಸುತ್ತಿನ ಮಾತುಕತೆ ಮುರಿದುಬಿದ್ದಿದೆ.
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರ ನಿವಾಸದಲ್ಲಿ ಮಂಗಳವಾರ ರಾತ್ರಿ ಮೊದಲ ಸುತ್ತಿನ ಮಾತುಕತೆ ನಡೆಯಿತು. ಇದರಲ್ಲಿ ರಾಜನಾಥ್ ಸಿಂಗ್, ರಕ್ಷಣಾ ಸಚಿವ ಮನೋಹರ ಪರಿಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಆರ್‌ಎಸ್‌ಎಸ್‌ನ ಹಿರಿಯ ನಾಯಕರು ಪಾಲ್ಗೊಂಡಿದ್ದರು. ಆದರೆ, ಯಾವುದೇ ಪ್ರಗತಿ ಸಾಧಿಸಲು ಸಾಧ್ಯವಾಗಲಿಲ್ಲ.
ಬುಧವಾರ ಬೆಳಗ್ಗೆ ಮತ್ತೊಂದು ಸುತ್ತಿನ ಪ್ರಯತ್ನ ನಡೆಯಿತು. ಭೂಸೇನಾ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್ ಸುಹಾಗ್, ನಿವೃತ್ತ ಯೋಧರ ನಿಯೋಗದೊಂದಿಗೆ ಸುಮಾರು ಎರಡು ಗಂಟೆಗಳ ಕಾಲ ಮಾತುಕತೆ ನಡೆಸಿದರು. ಆದರೆ, ಎರಡೂ ಪಕ್ಷಗಳು ತಮ್ಮ ನಿಲುವಿಗೆ ಆತುಕೊಂಡ ಕಾರಣ ಬಿಕ್ಕಟ್ಟು ಶಮನಗೊಳ್ಳಲಿಲ್ಲ.
ಬೇಡಿಕೆಗಳೇನು?
ವಾರ್ಷಿಕ ಶೇಕಡ 3ರಷ್ಟು ಹೆಚ್ಚಳದ ಬದಲು 2011ರ ವೇತನವನ್ನೇ ಬೇಸ್ ಲೆವೆಲ್ ಆಗಿರಿಸಿಕೊಂಡು 2015ರ ಏಪ್ರಿಲ್ 1ರಿಂದ ಪಿಂಚಣಿ ನೀಡಲು ಸರಕಾರ ಬದ್ಧವಿದೆ. ಆದರೆ ಸರಕಾರದ ಈ ಸೂತ್ರವನ್ನು ಒಪ್ಪದ ನಿವೃತ್ತ ಯೋಧರು ತಮ್ಮ ಮೂಲ ಬೇಡಿಕೆಗೆ ಪಟ್ಟು ಹಿಡಿದಿದ್ದರಿಂದ ಎರಡೂ ಸಭೆಗಳು ಮುರಿದುಬಿದ್ದಿವೆ.
ತೀವ್ರ ಸ್ವರೂಪ ಪಡೆದ ನಿರಶನ
ಸಂಧಾನ ಮುರಿದುಬಿದ್ದ ಬೆನ್ನಲ್ಲೇ ನಿರಶನ ಮತ್ತಷ್ಟು ತೀವ್ರ ಸ್ವರೂಪ ಪಡೆದಿದೆ. ಜಂತರ್-ಮಂತರ್‌ನಲ್ಲಿ ನಿವೃತ್ತ ಯೋಧರು ನಡೆಸುತ್ತಿರುವ ಹೋರಾಟಕ್ಕೆ ನೌಕಾಪಡೆಯ ಮಾಜಿ ದಂಡನಾಯಕ ಎ.ಕೆ.ಶರ್ಮಾ ಹಾಗೂ ಹುತಾತ್ಮ ಯೋಧ ಲ್ಯಾನ್ಸ್ ನಾಯಕ್ ಸುನೀಲ್ ಕುಮಾರ್ ಯಾದವ್ ಅವರ ತಂದೆ ಸನ್ವಾಲ್ ರಾಮ್ ಯಾದವ್ ಕೈಜೋಡಿಸುವ ಮೂಲಕ ಸರಕಾರಕ್ಕೆ ಇನ್ನಷ್ಟು ಚುರುಕು ಮುಟ್ಟಿಸಿದ್ದಾರೆ.
ಸಿಹಿ ಸುದ್ದಿ ಅನುಮಾನ
ಎರಡು ಸಂಧಾನ ಸಭೆಗಳು ವಿಫಲಗೊಂಡಿರುವುದರಿಂದ ಸರಕಾರವು, ಪಾಕ್ ವಿರುದ್ಧದ 1965ರ ಯುದ್ಧದ 50ನೇ ವರ್ಷಾಚರಣೆಯ ದಿನವಾದ ಆ.28ರಂದು ನಿವೃತ್ತ ಯೋಧರಿಗೆ ಸಿಹಿ ಸುದ್ದಿ ಘೋಷಿಸುವುದು ಅನುಮಾನವಾಗಿದೆ. ಒಟ್ಟಿನಲ್ಲಿ ಈ ಹೊಸ ಪಿಂಚಣಿ ಯೋಜನೆ ಜಾರಿಗೆ ಬಂದಲ್ಲಿ 22 ಲಕ್ಷ ನಿವೃತ್ತ ಯೋಧರು ಹಾಗೂ 6 ಲಕ್ಷ ವಿಧವೆಯರಿಗೆ ದೊಡ್ಡ ಮಟ್ಟದಲ್ಲಿ ಅನುಕೂಲವಾಗಲಿದೆ.
ಆಸ್ಪತ್ರೆಗೆ ದಾಖಲು:
ಈ ಮಧ್ಯೆ ನಿರಶನ ನಿರತ ನಿವೃತ್ತ ಹವಾಲ್ದಾರ್ ಅಶೋಕ್ ಚೌಹಾಣ್ ಹಾಗೂ ಮಾಜಿ ಸೇನಾಧಿಕಾರಿ ಕರ್ನಲ್ ಪುಷ್ಪೇಂದರ್ ಸಿಂಗ್ ಅಸ್ವಸ್ಥರಾಗಿದ್ದು ಆಸ್ಪತ್ರೆಯಲ್ಲಿದ್ದಾರೆ ಎಂದು ಮೂಲಗಳು ಹೇಳಿವೆ.