ರಾಷ್ಟ್ರೀಯ

ಪಟೇಲ್ ಮೀಸಲಾತಿ ಚಳವಳಿ: ಯುವಕನ ಕಸ್ಟಡಿ ಸಾವಿನ ಬಗ್ಗೆ ತನಿಖೆ ನಡೆಸಲು ಸಿಐಡಿಗೆ ಹೈಕೋರ್ಟ್ ಆದೇಶ

Pinterest LinkedIn Tumblr

GUJARATHC_21_10_2013ಅಹ್ಮದಾಬಾದ್, ಆ.28: ಪಾಟಿದಾರ್ ಅಮಾನತ್ ಆಂದೋಲನ್ ಸಮಿತಿಯ (ಪಿಎಎಎಸ್) ಸಂಚಾಲಕ ಹಾರ್ದಿಕ್ ಪಟೇಲ್‌ರ ಬಂಧನದ ಬಳಿಕ ನಡೆದಿದ್ದ ಹಿಂಸಾಚಾರದ ವೇಳೆ ನಗರ ಪೊಲೀಸರು ಬಂಧಿಸಿದ್ದ ಶ್ವೇತಾಂಗ್ ಪಟೇಲ್ (32) ಎಂಬವರ ಕಸ್ಟಡಿ ಸಾವಿನ ಕುರಿತು ತನಿಖೆ ನಡೆಸುವಂತೆ ರಾಜ್ಯ ಸಿಐಡಿಗೆ (ಕ್ರೈಂ) ಗುಜರಾತ್ ಹೈಕೋರ್ಟ್ ಶುಕ್ರವಾರ ಆದೇಶ ನೀಡಿದೆ.
ಪೊಲೀಸರು ತನ್ನ ಮಗನನ್ನು ಕೊಂದಿದ್ದಾರೆಂದು ಆರೋಪಿಸಿ, ಶ್ವೇತಾಂಗ್‌ನ ತಾಯಿ ಪ್ರಭಾಬೆನ್ ಎಂಬವರು ಈ ಬಗ್ಗೆ ತನಿಖೆ ಹಾಗೂ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ನಡೆಸಿದ ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ, ರಾಜ್ಯದ ಉನ್ನತ ತನಿಖೆ ಸಂಸ್ಥೆಗೆ ತನಿಖೆಯನ್ನು ಹಸ್ತಾಂತರಿಸಿದರು.
ತನಿಖೆಗೆ ಆದೇಶಿಸುವ ಮೊದಲು ಹೈಕೋರ್ಟ್, ಎರಡನೆಯ ಬಾರಿ ಮರಣೋತ್ತರ ಪರೀಕ್ಷೆ ನಡೆಸುವಂತೆ ನಾಗರಿಕ ಆಸ್ಪತ್ರೆಗೆ ಆದೇಶಿಸಿತು. ಶ್ವೇತಾಂಗ್ ತಲೆಗೆ ಏಟು ತಗಲಿದ ಕಾರಣ ಮೆದುಳಿನ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆಂದು ಮೊದಲಿನ ಮರಣೋತ್ತರ ಪರೀಕ್ಷಾ ವರದಿ ಹೇಳಿತ್ತು. ಇದು ಮೇಲ್ನೋಟಕ್ಕೆ ನರಹತ್ಯೆಯ ಪ್ರಕರಣವೆಂದು ನ್ಯಾಯಾಲಯ ಅಭಿಪ್ರಾಯಿಸಿದೆ.
ಐಪಿಎಸ್ ದರ್ಜೆಗಿಂತ ಕೆಳಗಿನ ಅಧಿಕಾರಿಗೆ ತನಿಖೆಯನ್ನು ಹಸ್ತಾಂತರಿಸಬಾರದೆಂಬ ಅರ್ಜಿದಾರರ ಬೇಡಿಕೆಗೆ ಪ್ರತಿಕ್ರಿಯಿಸಿದ ನ್ಯಾ.ಪರ್ದಿವಾಲಾ, ಇಲ್ಲಿ ಅನೇಕ ಐಪಿಎಸ್ ಅಧಿಕಾರಿಗಳಿದ್ದಾರೆ. ತಾವು ಪ್ರಾಮಾಣಿಕ ಅಧಿಕಾರಿಯೊಬ್ಬರನ್ನು ಬಯಸುತ್ತಿದ್ದೇವೆ’’ ಎಂದರು. ತನಿಖೆಯನ್ನು ಯಾರು ನಡೆಸಬೇಕು ಹಾಗೂ ಎಷ್ಟು ಸಮಯದೊಳಗೆ ನಡೆಸಬೇಕೆಂಬುದನ್ನು ನ್ಯಾಯಾಲಯ ಸೋಮವಾರ ನಿರ್ಧರಿಸಲಿದೆ. ಅಂತ್ಯಕ್ರಿಯೆ ನಡೆಸಲು ಅನುಕೂಲವಾಗುವಂತೆ ಮೃತದೇಹವನ್ನು ಕುಟುಂಬಿಕರಿಗೆ ಹಸ್ತಾಂತರಿಸುವಂತೆಯೂ ನ್ಯಾಯಾಲಯ ಅಧಿಕಾರಿಗಳಿಗೆ ಆದೇಶ ನೀಡಿದೆ.

ಮಂಗಳವಾರ ರಾತ್ರಿ ತನ್ನ ಮಗನನ್ನು ಬಾಪುನಗರದ ಮಾತೃಶಕ್ತಿ ಸೊಸೈಟಿಯ ತಮ್ಮ ಮನೆಯಿಂದ ಪೊಲೀಸರು ಕರೆದೊಯ್ದಿದ್ದರು ಹಾಗೂ ನಿಷ್ಕರುಣೆಯಿಂದ ಥಳಿಸಿದ್ದರು. ತನ್ನ ಮಗನೊಂದಿಗೆ ಇನ್ನೂ ಕೆಲವರನ್ನು ಪೊಲೀಸರು ವಶಪಡಿಸಿಕೊಂಡು ಎಲ್ಲರನ್ನೂ ಪೊಲೀಸ್ ಠಾಣೆಗೆ ಒಯ್ದಿದ್ದರು. ತಡ ರಾತ್ರಿ ತನಗೊಂದು ದೂರವಾಣಿ ಕರೆ ಬಂದಿತ್ತು. ಅದರಲ್ಲಿ ಪೊಲೀಸರು, ತನ್ನ ಮಗನನ್ನು ನೋಡಲು ತಾನು ಬಯಸುತ್ತಿದ್ದೇನೆಯೇ ಎಂದು ಕೇಳಿದ್ದರು. ತಾನು ಪೊಲೀಸ್ ಠಾಣೆಗೆ ಹೋದಾಗ, ಕೆಲವು ಪತ್ರಗಳಿಗೆ ತನ್ನಿಂದ ಸಹಿ ಪಡೆದುಕೊಂಡರು. ಬಳಿಕ ತನ್ನನ್ನು ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ತನ್ನ ಮಗ ಸಾವನ್ನಪ್ಪಿರುವುದನ್ನು ಕಂಡೆನೆಂದು ಅರ್ಜಿದಾರೆ ಪ್ರಭಾ ಬೆನ್ ವಿವರಿಸಿದ್ದಾರೆ. ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದ ಮೃತನ ಕುಟುಂಬಿಕರು ಶವವನ್ನು ಪಡೆದುಕೊಳ್ಳಲು ನಿರಾಕರಿಸಿದ್ದರು.

Write A Comment