ಕೋಲ್ಕತ್ತ: ಸಿಪಿಐ-ಎಂ ಹಮ್ಮಿಕೊಂಡಿದ್ದ ರೈತರ ರ್ಯಾಲಿಯಲ್ಲಿ ಹಿಂಸಾಚಾರ ನಡೆದಿದ್ದಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರ ಅಕ್ರೋಶ ವ್ಯಕ್ತಪಡಿಸಿದ್ದು, ಇನ್ನೂ 1000 ವರ್ಷ ಕಳೆದರೂ ಸಿಪಿಐ-ಎಂ ಗೆ ಗೆಲುವು ಸಿಗುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ತೃಣಮೂಲ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಛಾತ್ರ ಪರಿಷತ್ ನಲ್ಲಿ ಭಾಗವಹಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ಕಮ್ಯುನಿಷ್ಟ್ ಪಕ್ಷ ರಾಜಕೀಯ ದಿವಾಳಿಯತ್ತ ಸಾಗುತ್ತಿದೆ. ಜನರಿಂದ ತಿರಸ್ಕೃತಗೊಂಡವರು, ಅರಾಜಕತೆ ಸೃಷ್ಟಿಸುತ್ತಿರುವವರು, ರಾಜ್ಯದಲ್ಲಿ ಆತಂಕಕಾರಿ ವಾತಾವರಣ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಸಿಪಿಐ ನಡೆದುಕೊಳ್ಳುತ್ತಿರುವುದನ್ನು ನೋಡಿದರೆ 2016 ಅಲ್ಲ 3016 ರಾದರು ಅದು ಅಧಿಕಾರಕ್ಕೆ ಬರವುದಿಲ್ಲ, ಎಲ್ಲಾ ಪ್ರದೇಶಗಳ ಜನೆತೆ ಸಿಪಿಐ-ಎಂ ನ್ನು ತಿರಸ್ಕರಿಸಿದ್ದಾರೆ ಎಂದು ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ. ಪ್ರತಿಭಟನೆ ಎಂದರೆ ಗೂಂಡಾಗಿರಿ ನಡೆಸುವುದಲ್ಲ, ವಿರೋಧ ಪಕ್ಷದಲ್ಲಿದ್ದಾಗ ನಾವೂ ಪ್ರತಿಭಟನೆ ನಡೆಸಿದ್ದೇವೆ. ಆದರೆ ಎಂದಿಗೂ ಶಾಂತಿ ಕದಡುವ ಕೆಲಸ ಮಾಡಿಲ್ಲ ಎಂದು ಬ್ಯಾನರ್ಜಿ ತಿಳಿಸಿದ್ದಾರೆ.