ನವದೆಹಲಿ: ಕೆರಿಬಿಯನ್ ದ್ವೀಪಸಮೂಹದ ಕೇಮನ್ ಐಲ್ಯಾಂಡ್‌ನ ಜನಸಂಖ್ಯೆ ಕೇವಲ 54 ಸಾವಿರ. ಆದರೆ, ಈ ದ್ವೀಪದ ಹೂಡಿಕೆದಾರರು ಭಾರತದ ಷೇರುಪೇಟೆಯಲ್ಲಿ ₹85 ಸಾವಿರ ಕೋಟಿ ಹೂಡಿಕೆ ಮಾಡಿದ್ದಾರೆ..!
ಕಪ್ಪುಹಣದ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ವರದಿಯಲ್ಲಿ ಈ ವಿವರಗಳಿವೆ. ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಎಸ್‌ಐಟಿಗೆ ಈ ವಿವರ ಸಲ್ಲಿಸಿದೆ. ವಿದೇಶಿ ಹೂಡಿಕೆದಾರರು ‘ಸೆಬಿ’ಯಲ್ಲಿ ಹೆಸರು ನೋಂದಾಯಿಸಿಕೊಳ್ಳದೇ ಭಾರತದಲ್ಲಿ ಹಣ ಹೂಡಿಕೆ ಮಾಡಬೇಕಾದರೆ ಪಿ–ನೋಟ್‌ಗಳ (ಪಾರ್ಟಿಸಿಪೇಟರಿ ನೋಟ್) ಮೂಲಕ ಹೂಡಿಕೆ ಮಾಡಬಹುದಾಗಿದೆ.
ಈ ವರ್ಷದ ಫೆಬ್ರುವರಿ ಅಂತ್ಯದಲ್ಲಿ ಪಿ– ನೋಟ್‌ಗಳ ಮುಖಾಂತರ ಮಾಡಿದ ವಿದೇಶಿ ಹೂಡಿಕೆ ₹2.7 ಲಕ್ಷ ಕೋಟಿಗಳಿಗೆ ತಲುಪಿದೆ. ಕಪ್ಪುಹಣವನ್ನು ಸಕ್ರಮಗೊಳಿಸಲು ಭಾರತೀಯರು ಪಿ–ನೋಟ್ ಮಾರ್ಗ ಹಿಡಿದಿದ್ದಾರೆ ಎಂದು ‘ಸೆಬಿ’ ವಿಶೇಷ ತನಿಖಾ ತಂಡಕ್ಕೆ ತಿಳಿಸಿದೆ. ಪಿ–ನೋಟ್‌ಗಳ ಲಾಭ ಪಡೆದ ಐದು ಪ್ರಮುಖ ದೇಶಗಳೆಂದರೆ ಕೇಮನ್ ಐಲ್ಯಾಂಡ್, ಅಮೆರಿಕ, ಬ್ರಿಟನ್, ಮಾರಿಷಸ್ ಮತ್ತು ಬರ್ಮುಡಾ ಎಂದೂ ‘ಸೆಬಿ’ ತಿಳಿಸಿದೆ.
ಈ ಪೈಕಿ ಕೇಮನ್ ಲ್ಯಾಂಡ್, ಶೇ 31.31ರಷ್ಟು ಅಂದರೆ 85 ಸಾವಿರದಷ್ಟು ಹೂಡಿಕೆ ಮಾಡಿದೆ. ಕೇಮನ್ ಐಲ್ಯಾಂಡ್‌ನ ಜನಸಂಖ್ಯೆಗೂ ಅಲ್ಲಿಂದ ಆದ ಹೂಡಿಕೆಯನ್ನು ಗಮನಿಸಿದಾಗ ಎಲ್ಲವೂ ಸರಿಯಿಲ್ಲ ಎಂದು ಅರಿವಾಗುತ್ತದೆ ಎಂದು ಎಸ್‌ಐಟಿ ಹೇಳಿದೆ. ಪಿ–ನೋಟ್‌ಗಳನ್ನು ವರ್ಗಾಯಿಸಬಹುದಾಗಿದೆ. ಹಾಗಾಗಿ, ಕೇಮನ್ ಐಲ್ಯಾಂಡ್‌ನಿಂದ ಪಡೆದ ಪಿ–ನೋಟ್‌ಗಳ ಅಂತಿಮ ಹೂಡಿಕೆದಾರರನ್ನು ‘ಸೆಬಿ’ ಪತ್ತೆಹಚ್ಚಬೇಕಾಗಿದೆ ಎಂದು ಅದು ಅಭಿಪ್ರಾಯಪಟ್ಟಿದೆ. ಪಿ–ನೋಟ್‌ಗಳ ಅಂತಿಮ ಹೂಡಿಕೆದಾರರನ್ನು ಪತ್ತೆ ಹಚ್ಚಲು ‘ಸೆಬಿ’ ಹೊಸ ನಿಯಮಾವಳಿ ಜಾರಿಗೆ ತರಬೇಕು ಎಂದೂ ಎಸ್‌ಐಟಿ ಸಲಹೆ ನೀಡಿದೆ.