ನವದೆಹಲಿ: ಕೆಲಸ ಕೊಡಿಸುವುದಾಗಿ ಅಪ್ರಾಪ್ತೆಯೊಬ್ಬರನ್ನು ಜೈಪುರಕ್ಕೆ ಕರದೊಯ್ದು ಹೋಟೆಲ್‌ನಲ್ಲಿ ಹತ್ತು ಜನರು ಸಾಮೂಹಿಕ ಅತ್ಯಾಚರ ಎಸೆಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಘಟನೆ ಸಂಬಂಧ ರಾಕಿ ಹಾಗೂ ರಾಣಿ ದಂಪತಿ ಸೇರಿದಂತೆ ಆರು ಜನರನ್ನು ಬಂಧಿಸಲಾಗಿದೆ ಎಂದು ಡಿಸಿಪಿ ವಿಕ್ರಂಜಿತ್ ಸಿಂಗ್ ತಿಳಿಸಿದ್ದಾರೆ.
ಮಹೇಶ್, ಅನಿಲ್, ಅರ್ಜುನ್ ಹಾಗೂ ಕಮಲ್ ಬಂಧಿತರಾಗಿರುವ ಇತರ ಆರೋಪಿಗಳು. ಪ್ರಕರಣದ ಇನ್ನೂ ಆರು ಆರೋಪಿಗಳ ಪತ್ತೆ ಕಾರ್ಯ ಪ್ರಗತಿಯಲ್ಲಿದೆ.
ಏನಿದು ಘಟನೆ?: ಪೊಲೀಸರು ಹೇಳುವ ಪ್ರಕಾರ, ಅಪ್ರಾಪ್ತೆಯು ದೆಹಲಿ ಹೊರವಲಯದ ಮಂಗಳಪುರಿಗೆ ಪ್ರದೇಶದ ವಾಸಿ. ಅಪ್ಪ ತರಕಾರಿ ವ್ಯಾಪಾರಿ. ಜತೆಗೆ ಕುಡುಕ. ಕುಟುಂಬ ನಿರ್ವಹಣೆಗಾಗಿ ಅವರಿಗೆ ಕೆಲಸದ ತೀವ್ರ ಅಗತ್ಯವಿತ್ತು. ಈ ವಿಷಯವನ್ನು ತಮ್ಮ ನೆರೆಯಲ್ಲಿ ವಾಸಿಸುವ ರಿಕಿ ಹಾಗೂ ರಾಣಿ ದಂಪತಿಗೆ ತಿಳಿಸಿದ್ದರು. ದೆಹಲಿ ಹಾಗೂ ಸಮೀಪದ ಇತರ ನಗರಗಳಲ್ಲಿ ಹಲವು ಮಹಿಳೆಯರಿಗೆ ಉದ್ಯೋಗ ಕೊಡಿಸಿರುವುದಾಗಿ ಹೇಳಿಕೊಂಡಿದ್ದ ದಂಪತಿ, ಆಗಸ್ಟ್ 30ರಂದು ಅಪ್ರಾಪ್ತೆಯನ್ನು ಜೈಪುರಕ್ಕೆ ಕರೆದೊಯ್ದು ಲಾಡ್ಜ್‌ನಲ್ಲಿ ಇರಿಸಿದ್ದರು.
ಘಟನೆ ಬೆಳಕಿಗೆ ಬಂದಿದ್ದು ಹೇಗೆ?: ಈ ವೇಳೆ, ಅದೇ ಹೋಟೆಲಿನಲ್ಲಿ ಮ್ಯಾನೇಜರ್ ಕೂಡ ಆಗಿರುವ ಆರೋಪಿ ಮುಖೇಶ್ ಹಾಗೂ ಆತನ ಸಹಚರರು ಸರದಿಯಾಗಿ ಅಪ್ತಾಪ್ತೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಅದ್ಹೇಗೋ ಹೋಟೆಲ್‌ನಿಂದ ಪಾರಾದ ಅಪ್ರಾಪ್ತೆಯು ಬಸ್ ಮೂಲಕ ಆಗಸ್ಟ್31ರಂದು ದೆಹಲಿ ತಲುಪಿದ್ದಾಳೆ. ನಂತರ ಘಟನೆ ಸಂಬಂಧ ಮಂಗಳಪುರಿ ಪೊಲೀಸ್ ಠಾಣೆಯಲ್ಲಿ ಸೆಪ್ಟೆಂಬರ್1ರಂದು ಪ್ರಕರಣ ದಾಖಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ದೂರಿನ ಮೇರೆಗೆ ರಿಕಿ ಹಾಗೂ ರಾಣಿ ದಂಪತಿಯನ್ನು ಬಂಧಿಸಿದಾಗ ಅಪ್ರಾಪ್ತೆಯನ್ನು ಮಾರಲು ಕರೆದೊಯ್ದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ನಂತರ ತಂಡವೊಂದನ್ನು ಕಳುಹಿಸಿ ಇತರ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪೊಕ್ಸೊ ಕಾಯ್ದೆಯಡಿ ಪ್ರಕರಣ: ‘ಐಪಿಸಿಯ 372 (ವೇಷ್ತಾವೃತ್ತಿ ಉದ್ದೇಶದಿಂದ ಅಪ್ರಾಪ್ತೆಯ ಮಾರಾಟ ಹಾಗೂ ಇತರೆ), 376 ಜಿ (ಸಾಮೂಹಿಕ ಅತ್ಯಾಚಾರ) ಹಾಗೂ ಪೊಕ್ಸೊ ಕಾಯ್ಡಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ’ ಎಂದೂ ಸಿಂಗ್ ತಿಳಿಸಿದ್ದಾರೆ.