ಹರ್ಯಾಣ: ಯೋಗ ಗುರು ಬಾಬಾ ರಾಮ್ ದೇವ್ ಅವರ ಪುತ್ರಜೀವಕ್ ಬೀಜ ಸೃಷ್ಟಿಸಿದ ವಿವಾದದ ಬೆನ್ನಲ್ಲೇ ಇದೀಗ ಇದೇ ಮಾದರಿಯ ಇನ್ನೆರಡು ಔಷಧಗಳು ಸಂಚಲನ ಎಬ್ಬಿಸಿವೆ. ಪುತ್ರಜೀವಕ್ ಬೀಜಗಳು ಗಂಡು ಮಗು ಪಡೆಯಲು ಸಹಾಯ ಮಾಡುತ್ತವೆಂಬ ಗುಲ್ಲೆದ್ದಿತ್ತು.ಆದರೆ ಈ ಔಷಧಗಳು ತಾಯಿ ಒಡಲಿನ ಹೆಣ್ಣು ಭ್ರೂಣವನ್ನೇ ಗಂಡು ಮಗುವಿನ ಭ್ರೂಣವಾಗಿ ಬದಲಿಸುತ್ತದೆ ಎಂಬ ಜಾಹೀರಾತಿನೊಂದಿಗೆ ಭಾರಿ ಸಂಖ್ಯೆಯ ಜನರನ್ನು ಮರುಳು ಮಾಡಿವೆ.
ವಿಶೇಷವಾಗಿ ಹರ್ಯಾಣದಲ್ಲಿ ಭ್ರೂಣದ ಲಿಂಗ ಬದಲಿಸುವ(!?) ಎರಡು ಔಷಧಗಳು ಸಿಕ್ಕಾಪಟ್ಟೆ ಮಾರಾಟವಾಗುತ್ತಿವೆ. ಆದರೆ ಇದು ಕಾನೂನು ಬಾಹಿರ ಮಾರಾಟ. ಈ ಔಷಧಗಳು ಸರ್ಕಾರದಿಂದಾಗಲೀ ಯಾವುದೇ ವೈದ್ಯಕೀಯ ಹಾಗೂ ಗುಣಮಟ್ಟ ಮಾಪನ ಸಂಸ್ಥೆಯಿಂದಾಗಲೀ ಅನುಮೋ ದಿಸಲ್ಪಟ್ಟಿಲ್ಲ. ಮೋದಿ ಸರ್ಕಾರ ಬೇಟಿ ಬಚಾವೋ ಬೇಟಿ ಪಡಾವೋ ಎಂಬ ಆಂದೋಲನ ನಡೆಸಿ ಹೆಣ್ಣು ಸಂತಾನದ ವೃದ್ಧಿಗೆ ಪ್ರಯತ್ನಿಸುತ್ತಿರುವಾಗಲೇ ಇಂಥ ವಿಚಾರಗಳು ಜನಪ್ರಿಯಗೊಳ್ಳುತ್ತಿವೆ.
ಶಿವಲಿಂಗಿ ಮತ್ತು ಮಾಜುಫಲ: ಟೆಸ್ಟೋಸ್ಟೆರಾನ್ ಹೊಂದಿರುವ ಶಿವಲಿಂಗಿ ಎಂಬ ಔಷಧ ಹಾಗೂ ಮಾಜುಫಲ ಎಂಬ ಮತ್ತೊಂದು ಔಷಧಗಳಲ್ಲಿ ನೈಸರ್ಗಿಕ ಸ್ಟೆರಾಯ್ಡ್ ಇದ್ದು, ಹೆಚ್ಚಾಗಿ ಹೆಣ್ಣುಭ್ರೂಣದ ಪರಿವರ್ತನೆಗಾಗಿಯೇಬಳಸಲಾಗುತ್ತಿ ದೆಯಂತೆ. ಇದು ತಾಯಿ ಹಾಗೂ ಆಕೆಯ ಹೊಟ್ಟೆಯಲ್ಲಿರುವ ಭ್ರೂಣದ ಮೇಲೆ ತೀವ್ರ ಪರಿಣಾಮ ಬೀರುವುದು ನಿಶ್ಚಿತವೆಂದು ಈ ಔಷಧದ ದುಷ್ಪರಿಣಾಮದ ಬಗ್ಗೆ ವೈದ್ಯರು ಎಚ್ಚರಿಸಿದರೂ ಜನ ಅದಕ್ಕಾಗಿ ಮುಗಿಬೀಳುತ್ತಿದ್ದಾರೆ.
ಸುಳ್ಳು ಅಂಕಿ ಅಂಶಗಳನ್ನು ನೀಡಿ ಈ ಔಷಧಗಳಿಂದ ಭ್ರೂಣಗಳ ಲಿಂಗ ಪರಿವರ್ತನೆಯಾಗಿದೆ ಎಂದು ನಂಬಿಸುತ್ತಿರುವ ಮಾರಾಟಗಾರರು ಜನಸಾಮಾನ್ಯರ ದಿಕ್ಕುತಪ್ಪಿಸುತ್ತಿದ್ದಾರೆ. ಬೇಟಿ ಬಚಾವೊ ಬೇಟಿ ಪಡಾವೋ ಆಂದೋಲನದ ಮುಂದಾಳತ್ವ ವಹಿಸಿರುವ ಡಾ.ಜಿ.ಎಸ್.ಸಿಂಘಾಲï ಈ ಔಷಧ ಮಾರಾಟ ಪ್ರಕರಣದ ಬೆನ್ನು ಹತ್ತಿದ್ದು, ಈಗಾಗಲೇ ಅಂಬಾಲಾದ ಕುಖ್ಯಾತ ಕೇಂದ್ರವನ್ನು ಪತ್ತೆ ಮಾಡಿದ್ದಾರೆ. ಸರ್ಕಾರದ ಅಂಕಿ ಅಂಶಗಳ ಪ್ರಕಾರ ಕಳೆದ ಏಪ್ರಿಲ್ ಮತ್ತು ಜೂನ್ ನಡುವೆ 5,58,713 ಮಕ್ಕಳ ಜನನವಾಗಿದ್ದು, 12 ಸಾವಿರಕ್ಕೂ ಹೆಚ್ಚು ಭ್ರೂಣ ಹತ್ಯೆಗಳು ಸಂಭವಿಸಿವೆ.