ನವದೆಹಲಿ: ಗಗನಸಖಿಗಳೆಲ್ಲ ದುಃಖಿಗಳಾಗಿದ್ದಾರೆ, ಊಟ ತಿಂಡಿ ಬಿಟ್ಟು ಡಯೆಟ್ ಆರಂಭಿಸಿದ್ದಾರೆ. ತೂಕ ಇಳಿಸಿಕೊಳ್ಳಲು ಎಲ್ಲ ರೀತಿ ಸರ್ಕಸ್ ನಡೆಸುತ್ತಿದ್ದಾರೆ. ಇವರದ್ದು ಒಂದು ರೀತಿಯಲ್ಲಿ ಮಾಡು ಇಲ್ಲವೇ ಮಡಿ ಕದನ!
ಇಷ್ಟೆಲ್ಲಾ ಕಸರತ್ತು ಮಾಡಬೇಕಾದ ಅವಶ್ಯಕತೆಯೇನು ಎಂದು ಕೇಳುತ್ತಿದ್ದೀರಾ? ಇವರು ತೂಕ ಇಳಿಸಿಕೊಳ್ಳದೇ ಹೋದರೆ ಕೆಲಸ ಕಳೆದುಕೊಳ್ಳಬೇಕಾಗುತ್ತದೆ. ಹೌದು. ಏರ್‍ಇಂಡಿಯಾ ಸಂಸ್ಥೆಯು ಸ್ಥೂಲಕಾಯದ ಸಿಬ್ಬಂದಿಗೆ ಗೇಟ್‍ಪಾಸ್ ನೀಡಲು ರೆಡಿಯಾಗಿದೆ. ಗಗನಯಾತ್ರಿಗಳು ಸೇರಿದಂತೆ 125 ಮಂದಿಯನ್ನು ಕೆಲಸದಿಂದ ಕಿತ್ತುಹಾಕಲು ನಿರ್ಧರಿಸಿದೆ.
ಇದಕ್ಕೆ ಕಾರಣ, ಬೊಜ್ಜು/ಸ್ಥೂಲಕಾಯ. ತೆಳ್ಳಗೆ, ಬಳುಕುವ ಬಳ್ಳಿಯಂತೆ ಇರಬೇಕಾದ ಗಗನಸಖಿಯರು ತೂಕ ಹೆಚ್ಚಿಸಿಕೊಂಡು ಧಡೂತಿಗಳಾಗಿ ರುವುದು ಏರ್‍ಇಂಡಿಯಾಗೆ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ಕಳೆದ ವರ್ಷವೇ 600 ಸಿಬ್ಬಂದಿಗೆ ನಿಗದಿತ ಸಮಯದೊಳಗೆ ತೂಕ ಇಳಿಸಿಕೊಂಡು `ಶೇಪ್ ಅಪ್’ ಆಗಬೇಕೆಂದು ಸ್ಪಷ್ಟ ಆದೇಶ ಹೊರಡಿಸಿತ್ತು.
ಅದರಂತೆ, ಯಾರು ಈಗ ತೆಳ್ಳಗಾಗಿದ್ದಾರೋ ಅವರನ್ನು ಉಳಿಸಿಕೊಂಡು, ಉಳಿದವರಲ್ಲಿ ಕೆಲವರಿಗೆ ಗ್ರೌಂಡ್ ಡ್ಯೂಟಿ ಕೊಟ್ಟು, ಮತ್ತೆ ಕೆಲವರಿಗೆ ಸ್ವಯಂ ನಿವೃತ್ತಿ ನೀಡಲು ಏರ್ ಇಂಡಿಯಾ ನಿರ್ಧರಿಸಿದೆ. ಪ್ರತಿ 3 ತಿಂಗಳಿಗೊಮ್ಮೆ ವೈದ್ಯರು ಸಿಬ್ಬಂದಿಯ ಪರೀಕ್ಷೆ ನಡೆಸಿ, `ಫಿಟ್’, `ಟೆಂಪರರಿ ಫಿಟ್’ ಮತ್ತು `ಪರ್ಮನೆಂಟ್ ಅನ್‍ಫಿಟ್’ ಎಂಬ ಸರ್ಟಿಫಿಕೇಟ್ ನೀಡುತ್ತಾರೆ.
ಜತೆಗೆ, ಅತಿಕಾ ಯ ಹೊಂದಿರುವವರಿಗೆ ಮತ್ತೆ ಪೂರ್ವದ ಸ್ಥಿತಿಗೆ ಬರಲು 3 ತಿಂಗಳ ಕಾಲಾವಕಾಶ ನೀಡಲಾಗುತ್ತದೆ. ಅದೂ ಫೇಲ್ ಆಯಿತೆಂದರೆ, ಕೆಲಸಬಿಟ್ಟು ಮನೆಗೆ ಹೋಗುವುದೊಂದೇ ದಾರಿ.