ನವದೆಹಲಿ: ಮಹಾದಾಯಿ ನದಿ ನೀರಿನ ವಿವಾದದ ವಿಚಾರಣೆ ನಡೆಸುತ್ತಿರುವ ನ್ಯಾ. ಜೆ.ಎಂ. ಪಾಂಚಾಲ ನೇತೃತ್ವದ ನ್ಯಾಯಮಂಡಳಿ ಮುಂದೆ ಮಧ್ಯಂತರ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸುತ್ತಿದೆ.
ಕಳಸಾ– ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ನರಗುಂದ– ನವಲಗುಂದ ಸೇರಿದಂತೆ ಮುಂಬೈ– ಕರ್ನಾಟಕ ಭಾಗದಲ್ಲಿ ನಡೆಯುತ್ತಿರುವ ಚಳವಳಿ ದಿನದಿಂದ ದಿನಕ್ಕೆ ಉಗ್ರ ಸ್ವರೂಪ ಪಡೆಯುತ್ತಿರುವುದರಿಂದ ಮಧ್ಯಂತರ ಪರಿಹಾರ ಕೇಳಿ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ.
ರಾಜ್ಯದ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಸೋಮವಾರ ಹಿರಿಯ ವಕೀಲ ಎಫ್.ಎಸ್. ನಾರಿಮನ್ ಅವರ ಜತೆ ಸುದೀರ್ಘವಾಗಿ ಚರ್ಚಿಸಿದರು. ನ್ಯಾಯಮಂಡಳಿಯಲ್ಲಿ ರಾಜ್ಯದ ಪರ ನಾರಿಮನ್ ವಾದಿಸುತ್ತಿದ್ದಾರೆ.
ಮಧ್ಯಂತರ ಅರ್ಜಿ ಸಲ್ಲಿಸುವುದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ನಾರಿಮನ್, ಅಗತ್ಯ ದಾಖಲೆಗಳನ್ನು ಒದಗಿಸುವಂತೆ ಸರ್ಕಾರಕ್ಕೆ ಕೇಳಿದ್ದಾರೆ. ರಾಜ್ಯದ ಎಂಜಿನಿಯರ್‌ಗಳ ಜತೆ ಸಮಾಲೋಚಿಸಿದ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆಂದು ವಕೀಲರ ತಂಡದ ಹಿರಿಯ ಸದಸ್ಯ ಮೋಹನ್ ಕಾತರಕಿ ಹೇಳಿದ್ದಾರೆ.
ಎತ್ತಿನಹೊಳೆ ಯೋಜನೆ: ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಬದ್ಧವಾಗಿದೆ. ಈ ಯೋಜನೆ ಕಾರ್ಯಗತವಾಗುವುದರಿಂದ ಯಾರಿಗೂ ನಷ್ಟವಿಲ್ಲ. ಯಾವುದೇ ಕಾರಣಕ್ಕೂ ಜನ ಭಯ ಬೀಳಬಾರದು. ಈ ಯೋಜನೆಗೆ ಸಂಬಂಧಿಸಿದ ಎಲ್ಲ ಗೊಂದಲಗಳನ್ನು ನಿವಾರಿಸಲು ಸರ್ಕಾರ ಸಿದ್ಧವಿದೆ ಎಂದೂ ಸಚಿವ ಎಂ.ಬಿ. ಪಾಟೀಲ ಭರವಸೆ ನೀಡಿದರು.