ರಾಷ್ಟ್ರೀಯ

ಭಾರತದಲ್ಲಿ ಕಾರುಗಳ ಏರ್‌ಬ್ಯಾಗ್: ತಯಾರಕರಿಗೆ ಭಾರೀ ಅವಕಾಶ

Pinterest LinkedIn Tumblr

11112.jpg1ಹೊಸದಿಲ್ಲಿ, ಸೆ.14: ಭಾರತದಲ್ಲಿ ಕಾರುಗಳ ಏರ್‌ಬ್ಯಾಗ್ ಉತ್ಪಾದನೆ ಮತ್ತು ಮಾರಾಟಕ್ಕೆ ಸಾಕಷ್ಟು ಅವಕಾಶವಿರುವುದನ್ನು ಮನಗಂಡು ಈ ಕ್ಷೇತ್ರದ ಪ್ರಮುಖ ಜಾಗತಿಕ ಕಂಪೆನಿಗಳು ಭಾರತಕ್ಕೆ ಲಗ್ಗೆ ಹಾಕಿವೆ.
ಭಾರತದಲ್ಲಿನ ಅತ್ಯಂತ ಕೆಟ್ಟ ರಸ್ತೆ ಸುರಕ್ಷತೆಯ ಪರಿಸ್ಥಿತಿಯನ್ನು ಕಠಿಣ ಮಾನದಂಡಗಳ ಅಡಿಯಲ್ಲಿ ಸುಧಾರಣೆ ಮಾಡಲು ಕೇಂದ್ರ ಸರಕಾರ ಹೊರಟಿದೆ. ಈ ಹಿನ್ನೆಲೆಯಲ್ಲಿ 2 ಶತಕೋಟಿ ಡಾಲರ್ ವೌಲ್ಯದ ಏರ್‌ಬ್ಯಾಗ್ ಉತ್ಪಾದನೆಗೆ ಅವಕಾಶಗಳು ಸೃಷ್ಟಿಯಾಗಿವೆ ಎಂದು ಅಂದಾಜು ಮಾಡಲಾಗಿದೆ.
ಭಾರತದಲ್ಲಿ ಪ್ರತಿ ನಾಲ್ಕು ನಿಮಿಷಕ್ಕೆ ಒಬ್ಬರು ರಸ್ತೆ ಅಪಘಾತದಲ್ಲಿ ಸಾಯುತ್ತಾರೆ. 2014ರಲ್ಲಿ 1.41 ಲಕ್ಷ ಜನರು ರಸ್ತೆಗಳಲ್ಲಿ ಮೃತಪಟ್ಟಿದ್ದಾರೆ. ಆದರೂ, ಪ್ರತಿವರ್ಷ ಮಾರಾಟವಾಗುವ 2.6 ದಶಲಕ್ಷ ಕಾರುಗಳ ಪೈಕಿ ಮೂರನೆ ಒಂದಕ್ಕಿಂತಲೂ ಕಡಿಮೆ ಕಾರುಗಳಲ್ಲಿ ಏರ್‌ಬ್ಯಾಗ್‌ಗಳನ್ನು ಜೋಡಣೆ ಮಾಡಲಾಗುತ್ತದೆ. ಕೇಂದ್ರ ಸರಕಾರದ ಉದ್ದೇಶಿತ ರಸ್ತೆ ಸುರಕ್ಷತಾ ಮಾನದಂಡಗಳು (ಕಾಯ್ದೆ) 2017ರ ಹೊತ್ತಿಗೆ ಜಾರಿಗೆ ಬರಲಿವೆ. ಏರ್‌ಬ್ಯಾಗ್ ಹೊಂದಿಲ್ಲದ ಕಾರುಗಳಿಗೆ ಅತ್ಯಂತ ಕಡಿಮೆ ಸುರಕ್ಷತಾ ಅಂಕಗಳನ್ನು (ರೇಟಿಂಗ್) ನೀಡುವ ವ್ಯವಸ್ಥೆ ಕಾಯ್ದೆಯಲ್ಲಿದೆ. ಈ ಹಿನ್ನೆಲೆಯಲ್ಲಿ ಕಾರುಗಳ ಸುರಕ್ಷತಾ ಉಪಕರಣಗಳ ಉತ್ಪಾದಕರಿಗೆ ವ್ಯವಹಾರದ ಅವಕಾಶ ಸೃಷ್ಟಿಯಾಗಿದೆ.
2020ರೊಳಗೆ, ಭಾರತದಲ್ಲಿ ಏರ್‌ಬ್ಯಾಗ್ ಮಾರಾಟ ವ್ಯವಹಾರ ಶೇ.11ರಷ್ಟು ಏರಿಕೆ ಕಾಣುವ ನಿರೀಕ್ಷೆ ಹೊಂದಲಾಗಿದೆ. ಅಂದರೆ, 2 ಶತಕೋಟಿ ಡಾಲರ್ ತಲುಪಬಹುದೆಂದು ಟ್ರಾನ್ಸ್‌ಪರೆನ್ಸಿ ಮಾರ್ಕೆಟ್ ರಿಸರ್ಚ್‌ನ ಅಂಕಿಅಂಶಗಳು ತಿಳಿಸಿವೆ.
2020ರ ಹೊತ್ತಿಗೆ ಭಾರತದಲ್ಲಿ ಪ್ರತಿವರ್ಷ 5 ದಶಲಕ್ಷ ಕಾರುಗಳ ಮಾರಾಟವಾಗಬಹುದು ಎಂದು ಅದು ಅಂದಾಜು ಮಾಡಿದೆ. ಜಾಗತಿಕ ಮಟ್ಟದಲ್ಲಿ ಏರ್‌ಬ್ಯಾಗ್ ಉತ್ಪಾದನೆಯ ಬೃಹತ್ ಕಂಪೆನಿಗಳಾದ ಆಟೋಲಿವ್ ಇಂಕ್, ಟಕಾಟಾ ಕಾರ್ಪ್, ಟಿಆರ್‌ಡಬ್ಲು ಆಟೋಮೋಟಿವ್ ಇಂಕ್ ಮತ್ತು ಟಯೋಡಾ ಗೊಸಿಯಿ ಕಂಪೆನಿಗಳು ಈ ಅವಕಾಶವನ್ನು ಬಳಸಿಕೊಳ್ಳಲು ಮುಂದಾಗಿದ್ದು, ಜಂಟಿ ಸಹಯೋಗದಲ್ಲಿ ಘಟಕ ಸ್ಥಾಪನೆಗೆ ಹೊರಟಿವೆ.

Write A Comment