ನವದೆಹಲಿ: ನರೇಂದ್ರ ಮೋದಿ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಭಾನುವಾರ ಇಲ್ಲಿ ಕಟುವಾಗಿ ಟೀಕಿಸಿದ ಕಾಂಗ್ರೆಸ್, ವಿವಾದಿತ ಭೂ ಸ್ವಾಧೀನ ಮಸೂದೆ ಕೈಬಿಡದಿದ್ದರೆ ರಾಜ್ಯಗಳಿಗೂ ಪ್ರತಿಭಟನೆ ಕೊಂಡೊಯ್ಯುವುದಾಗಿ ಎಚ್ಚರಿಸಿತು.
ಭೂಸ್ವಾಧೀನ ಮಸೂದೆ ಲೋಕಸಭೆಯಲ್ಲಿ ಮಂಡನೆಯಾಗುವುದನ್ನು ತಡೆಯಲು ಯಶಸ್ವಿಯಾದ ಕಾಂಗ್ರೆಸ್, ಯಾವುದೇ ರೂಪದಲ್ಲಿ ಈ ಮಸೂದೆ ಜಾರಿಗೊಳಿಸಲು ಯತ್ನಿಸಿದರೂ ಹೋರಾಟ ತೀವ್ರಗೊಳಿಸುವುದಾಗಿ ಸಂದೇಶ ರವಾನಿಸಿತು.
ಇಲ್ಲಿಯ ರಾಮಲೀಲಾ ಮೈದಾನದಲ್ಲಿ ‘ಕಿಸಾನ್ ಸಮ್ಮಾನ್ ಸಮಾವೇಶ’ ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ, ಎನ್‌ಡಿಎ ಸರ್ಕಾರ ಭೂ ಸ್ವಾಧೀನ ಮಸೂದೆಯನ್ನು ಮರಳಿ ತರಲು ಪ್ರಯತ್ನಿಸಿದರೆ ಬೀದಿಗಿಳಿಯುವುದಾಗಿ ಇಬ್ಬರೂ ಮುಖಂಡರು ವಾಗ್ದಾನ ಮಾಡಿದರು.
ಕಾರ್ಪೊರೇಟ್ ವಲಯಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಎನ್‌ಡಿಎ ಸರ್ಕಾರ ಭೂಸ್ವಾಧೀನ ಮಸೂದೆ ಜಾರಿಗೆ ತರುವ ಯತ್ನ ಮಾಡುತ್ತಿದೆ. ಕೇಂದ್ರದಲ್ಲಿ ಮಸೂದೆ ಜಾರಿ ಅಸಾಧ್ಯವಾಗಿರುವುದರಿಂದ ರಾಜ್ಯಗಳಲ್ಲಿ ಜಾರಿ ಮಾಡುವಂತೆ ಪ್ರಧಾನಿ ಸಲಹೆ ನೀಡಿದ್ದಾರೆ. ಈಗ ‘ರಣರಂಗ’ ದೆಹಲಿಯಿಂದ ರಾಜ್ಯಗಳಿಗೆ ಸ್ಥಳಾಂತರಗೊಂಡಿದೆ ಎಂದು ಸೋನಿಯಾ ವಿಶ್ಲೇಷಿಸಿದರು.
ರೈತರು ಹೆಚ್ಚು ಜಾಗೃತರಾಗಬೇಕಾಗಿದೆ. ಸ್ವಲ್ಪ ಮೈಮರೆತರೂ ನೀವು ನಡೆಸಿದ ಹೋರಾಟ ವ್ಯರ್ಥವಾಗಲಿದೆ. ಜಮೀನಿನಿಂದ ನಿಮ್ಮನ್ನು ಹೊರಗೆ ದಬ್ಬಲಾಗುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷರು ಕಿವಿಮಾತು ಹೇಳಿದರು.
ಪ್ರಧಾನಿ ಮೋದಿ ರೈತ ವಿರೋಧಿ ನಿಲುವು ಹೊಂದಿದ್ದಾರೆ. ಸಂಕಷ್ಟದಲ್ಲಿರುವ ರೈತರನ್ನು ಭೇಟಿ ಮಾಡಿ ಸಮಸ್ಯೆ ಆಲಿಸುವಷ್ಟು ಸಮಯ ಮತ್ತು ಔದಾರ್ಯ ಅವರಿಗಿಲ್ಲ. ಆದರೆ, ಬೆರಳೆಣಿಕೆಯಷ್ಟು ಉದ್ಯಮಿ ಗೆಳೆಯರ ಹಿತಾಸಕ್ತಿ ಕಾಪಾಡಲು ಕಾಳಜಿ ಇದೆ. ಅದಕ್ಕೆ ಬೇಕಾದ ಸಮಯವಿದೆ ಎಂದು ಸೋನಿಯಾ ಲೇವಡಿ ಮಾಡಿದರು. ಲೋಕಸಭೆ ಚುನಾವಣೆ ವೇಳೆ ಕೊಟ್ಟ ಭರವಸೆಗಳನ್ನು ಪ್ರಧಾನಿ ಮರೆತಿದ್ದಾರೆ. ಜನರನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.
ವಿದೇಶಗಳನ್ನು ಸುತ್ತುವುದರಲ್ಲಿ ಅವರಿಗೆ ಹೆಚ್ಚು ಆಸಕ್ತಿಯಿದೆ ಎಂದು ಕಾಂಗ್ರೆಸ್ ಅಧ್ಯಕ್ಷರು ಕಿಡಿ ಕಾರಿದರು. ಕೇಂದ್ರ ಸರ್ಕಾರ ರೈತರು, ಬಡವರ ಸಮಸ್ಯೆಗಳಿಗೆ ಕಿವುಡಾದಾಗ ಕಾಂಗ್ರೆಸ್ ಅಸಹಾಯಕರ ನೆರವಿಗೆ ಧಾವಿಸಿದೆ. ರೈತರ ಉತ್ಪನ್ನಗಳಿಗೆ ಸರಿಯಾದ ಬೆಂಬಲ ಬೆಲೆ ಸಿಗದಿದ್ದಾಗ, ಅತಿವೃಷ್ಠಿ ಮತ್ತು ಅನಾವೃಷ್ಟಿಯಿಂದ ತೊಂದರೆಗೆ ಒಳಗಾದ ಸಮಯದಲ್ಲಿ ಅವರ ಕೈಹಿಡಿದಿದೆ. ಬಡವರ ಪರವಾಗಿ ದನಿ ಎತ್ತಿದೆ. ಯುಪಿಎ ಸರ್ಕಾರ 72 ಸಾವಿರ ಕೋಟಿ ರೂಪಾಯಿ ಕೃಷಿ ಸಾಲ ಮನ್ನಾ ಮಾಡಿದೆ ಎಂದು ಸೋನಿಯಾ ಹೇಳಿದರು.
ರಾಹುಲ್ ವ್ಯಾಖ್ಯಾನ: ಕಾಂಗ್ರೆಸ್ ರೈತರ ಜಮೀನು ಉಳಿಸಲು ಮಾತ್ರ ಹೋರಾಡುತ್ತಿಲ್ಲ. ಭೂಮಿಯನ್ನು ತಾಯಿ ಎಂದೇ ನಂಬಿರುವ ರೈತರ ಆತ್ಮಗೌರವ ರಕ್ಷಣೆಗಾಗಿ ಶ್ರಮಿಸುತ್ತಿದೆ ಎಂದೂ ರಾಹುಲ್ ವ್ಯಾಖ್ಯಾನಿಸಿದರು. ನರೇಂದ್ರ ಮೋದಿ ಅವರ ಮಾತು ನಂಬಿಕೊಂಡು ಮೋಸ ಹೋಗಬೇಡಿ ಎಂದೂ ಅವರು ತಿಳಿಸಿದರು.
ಮೋದಿ ಅವರು ಏನೆಂದು ನಮಗೆ ಚೆನ್ನಾಗಿ ಗೊತ್ತಿದೆ. ಅವರ ಚಿಂತನೆ– ಹೇಳಿಕೆ ನಡುವೆ ವ್ಯತ್ಯಾಸವಿದೆ. ಯುಪಿಎ ಸರ್ಕಾರ ಜಾರಿಗೆ ತಂದಿರುವ ಭೂ ಸ್ವಾಧೀನ ಮಸೂದೆಯನ್ನು ಬದಲಾವಣೆ ಮಾಡುವುದಿಲ್ಲ ಎಂದು ಮೊದಲಿಗೆ ಹೇಳಿದ್ದರು. ಆದರೆ, ಅವರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮೂರು ಸಲ ಸುಗ್ರೀವಾಜ್ಞೆ ಜಾರಿ ಮಾಡಿದರು ಎಂದು ರಾಹುಲ್ ಟೀಕಿಸಿದರು.
ಸಂಸತ್ತಿನೊಳಗೆ ಭೂ ಸ್ವಾಧೀನ ಮಸೂದೆ ವಿರುದ್ಧದ ಹೋರಾಟ ಮುಗಿದಿಲ್ಲ. ಇನ್ನೂ ಮುಂದುವರಿಯಲಿದೆ. ಹೋರಾಟವನ್ನು ವಿಧಾನಸಭೆಗೂ ಒಯ್ಯುವಂತೆ ನಮ್ಮ ಪಕ್ಷದ ನಾಯಕರಿಗೆ ಹೇಳಿದ್ದೇವೆ ಎಂದೂ ಕಾಂಗ್ರೆಸ್ ಉಪಾಧ್ಯಕ್ಷರು ಖಚಿತಪಡಿಸಿದರು. ರಾಹುಲ್ ಈ ಮಾತು ಹೇಳುವ ಸಮಯದಲ್ಲಿ ವಿವಿಧ ರಾಜ್ಯಗಳ ಕಾಂಗ್ರೆಸ್ ಮುಖಂಡರೂ ಹಾಜರಿದ್ದರು. ರೈತರು ತಮ್ಮ ಪಕ್ಷಕ್ಕೆ ಬೆಂಬಲವಾಗಿ ನಿಂತಿದ್ದರಿಂದಲೇ ಎನ್‌ಡಿಎ ಸರ್ಕಾರ ಭೂ ಸ್ವಾಧೀನ ಮಸೂದೆ ಜಾರಿ ಚಿಂತನೆಯಿಂದ ಹಿಂದಕ್ಕೆ ಸರಿಯಿತು ಎಂದು ಕಾಂಗ್ರೆಸ್ ಮುಖಂಡರು ಪ್ರತಿಪಾದಿಸಿದರು.
*
ಮನಮೋಹನ್ ಸಿಂಗ್ ಆರೋಪ
ಯುಪಿಎ ಸರ್ಕಾರ ಜಾರಿಗೆ ತಂದಿರುವ ಭೂಸ್ವಾಧೀನ ಮಸೂದೆಯನ್ನು ದುರ್ಬಲಗೊಳಿಸಲು ಎನ್‌ಡಿಎ ಸರ್ಕಾರ ಸತತವಾಗಿ ಪ್ರಯತ್ನಿಸುತ್ತಿದೆ ಎಂದು ಮಾಜಿ ಪ್ರಧಾನಿ ಮನಮೋಹನ್‌ಸಿಂಗ್ ದೂರಿದರು. ರೈತ ವಿರೋಧಿಯಾದ ಮೋದಿ ಸರ್ಕಾರ ಕಾಂಗ್ರೆಸ್ ಮುಖಂಡರ ಒತ್ತಡಕ್ಕೆ ಮಣಿದು ಸುಗ್ರೀವಾಜ್ಞೆ ಹಿಂತೆಗೆದುಕೊಂಡಿತು ಎಂದೂ ಅಭಿಪ್ರಾಯಪಟ್ಟರು.
ರಾಹುಲ್ ವಿಷಾದ: ಪ್ರಧಾನಿ ನರೇಂದ್ರ ಮೋದಿ ಅವರ ಗುಜರಾತ್ ಮಾದರಿ ಅಭಿವೃದ್ಧಿ ಬಡವರು– ಶೋಷಿತ ವರ್ಗಗಳನ್ನು ಗುರಿಯಾಗಿ ಇಟ್ಟುಕೊಂಡಿಲ್ಲ. ಶ್ರೀಮಂತರು, ಉದ್ಯಮಿಗಳನ್ನು ಉದ್ದೇಶವಾಗಿ ಇಟ್ಟುಕೊಂಡಿದೆ. ಗುಜರಾತಿನ ಭಾವನಗರದಲ್ಲಿ ಹಡಗು ಒಡೆಯುವ ಕಾರ್ಮಿಕರು ದಯನೀಯವಾಗಿ ಸಾಯುತ್ತಿರುವುದೇ ಇದಕ್ಕೊಂದು ತಾಜಾ ನಿದರ್ಶನ ಎಂದು ರಾಹುಲ್ ಗಾಂಧಿ ವಿಷಾದಿಸಿದರು. ಹಡಗು ಒಡೆಯುವ ಕಾರ್ಮಿಕರು ಕ್ಯಾನ್ಸರ್ ಮತ್ತಿತರ ಗಂಭೀರ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ. ಅವರನ್ನು ರಕ್ಷಣೆ ಮಾಡುವ ಕಾನೂನು ಗುಜರಾತಿನಲ್ಲಿ ಇಲ್ಲ ಎಂದು ಕಾಂಗ್ರೆಸ್ ಉಪಾಧ್ಯಕ್ಷರು ಆರೋಪಿಸಿದರು.