ನವದೆಹಲಿ, ಸೆ.28: ದಕ್ಷಿಣ ದೆಹಲಿ ಮಾಲ್ ಒಂದರಲ್ಲಿ ಪತ್ತೇದಾರಿ ರಹಸ್ಯ ಕ್ಯಾಮರಾವನ್ನು ಶೂಗಳಿಗೆ ಅಳವಡಿಸಿ ಮಹಿಳೆಯರ ಅಶ್ಲೀಲ ಫೋಟೊ ತೆಗೆಯುತ್ತಿದ್ದ ಕಾರ್ಪೊರೇಟ್ ವಕೀಲರೊಬ್ಬರನ್ನು ಬಂಧಿಸಲಾಗಿದೆ.
ಬಂಧಿತ ವಕೀಲ 35ರ ಹರೆಯದವನಾಗಿದ್ದು, ಹರಿಯಾಣದ ಗ್ರಾಹಕ ವೇದಿಕೆಯೊಂದರ ಅಧ್ಯಕ್ಷರ ಮಗ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಪ್ರಸಿದ್ಧ ಮಳಿಗೆಯೊಂದರಲ್ಲಿ ಶಾರ್ಟ್ ಡ್ರೆಸ್ ಹಾಕಿಕೊಂಡಿದ್ದ ಯುವತಿಯೊಬ್ಬಳ ಬೆನ್ನಹಿಂದೆ ನಿಂತಿದ್ದ ವಕೀಲ ಬಲಗಾಲಿನಲ್ಲಿ ಅಳವಡಿಸಿದ್ದ ಕ್ಯಾಮರಾ ಮೂಲಕ ಅಶ್ಲೀಲ ಚಿತ್ರ ಸೆರೆ ಹಿಡಿಯುತ್ತಿದ್ದ. ವಕೀಲನ ವರ್ತನೆ ಕಂಡು ಅನುಮಾನಗೊಂಡ ಮ್ಯಾನೇಜರ್ ಕೆಟ್ಟ ಚಾಳಿ ಬಯಲಿಗೆಳೆದಿದ್ದಾನೆ.
ಮ್ಯಾನೇಜರ್ ಪ್ರಶ್ನಿಸುತ್ತಿದ್ದಂತೆಯೆ ಮಳಿಗೆಯಿಂದ ಓಡಿ ಹೋಗಲು ಯತ್ನಿಸಿದ ವಕೀಲನನ್ನು ಭದ್ರತಾ ಸಿಬ್ಬಂದಿಗಳು ಹಿಡಿದು ಶೂನಲ್ಲಿ ಅಳವಡಿಸಿದ್ದ ಕ್ಯಾಮರಾ ಪತ್ತೆಹಚ್ಚಿದ್ದಾರೆ.
ಪೊಲೀಸ್ ತನಿಖೆಯ ವೇಳೆ ಕ್ಯಾಮಾರದಲ್ಲಿ ಸೆರೆಯಾಗಿದ್ದ 12 ಅಶ್ಲೀಲ ಕ್ಲಿಪ್‌ಗಳು ಪತ್ತೆಯಾಗಿವೆ. ವಿಡೀಯೊಗಳನ್ನು ಈತ ತಾನು ಮಾತ್ರ ನೋಡಿದ್ದಾನೆಯೇ, ಇಲ್ಲ ಅಂತರ್ಜಾಲದಲ್ಲಿ ಹರಿಯ ಬಿಟ್ಟಿದ್ದಾನೋ ಎನ್ನುವ ಬಗ್ಗೆ ತನಿಖೆ ಮುಂದುವರೆದಿದೆ. ಈ ಬಗ್ಗೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.