ರಾಷ್ಟ್ರೀಯ

ಕಾಸರಗೋಡಿನಲ್ಲಿ ಇನ್ನೊಂದು ಬ್ಯಾಂಕ್ ದರೋಡೆ

Pinterest LinkedIn Tumblr

Sequence-2-fiಕಾಸರಗೋಡು, ಸೆ.28: ಜಿಲ್ಲೆಯಲ್ಲಿ ತಿಂಗಳೊಳಗೆ ಮತ್ತೊಂದು ಬ್ಯಾಂಕ್ ದರೋಡೆ ನಡೆದಿದ್ದು, ಚೆರ್ವತ್ತೂರಿನಲ್ಲಿರುವ ವಿಜಯಾ ಬ್ಯಾಂಕ್‌ಗೆ ನುಗ್ಗಿರುವ ಕಳ್ಳರು ಸುಮಾರು ನಾಲ್ಕು ಕೋಟಿ ರೂ. ಮೌಲ್ಯದ ಚಿನ್ನಾಭರಣ ಮತ್ತು 2.95 ಲಕ್ಷ ರೂ. ದೋಚಿದ ಘಟನೆ ಸೋಮವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಬ್ಯಾಂಕ್‌ನ ಭದ್ರತಾ ಕೊಠಡಿಗೆ ಕನ್ನ ಕೊರೆದು ಈ ಕಳ್ಳತನ ನಡೆಸಲಾಗಿದೆ. ಬ್ಯಾಂಕ್‌ಗೆ ಕಳೆದ ಮೂರು ದಿನ ಸತತ ರಜೆ ಇದ್ದ ಅವಧಿಯಲ್ಲಿ ಈ ಕೃತ್ಯ ನಡೆದಿರಬಹುದು ಎಂದು ಶಂಕಿಸಲಾಗಿದೆ. ಬ್ಯಾಂಕ್‌ನಲ್ಲಿದ್ದ ಒಂದು ಲಾಕರ್‌ನ್ನು ಒಡೆದು ಚಿನ್ನಾಭರಣ ಮತ್ತು ನಗದು ದೋಚಿದ್ದು, ಇನ್ನೊಂದು ಲಾಕರ್‌ನ್ನು ಒಡೆಯಲು ಕಳ್ಳರಿಗೆ ಸಾಧ್ಯವಾಗಿಲ್ಲ. ಚೆರ್ವತ್ತೂರು ಬಸ್ ನಿಲ್ದಾಣದ ಪಕ್ಕದಲ್ಲೇ ಇರುವ ಕಟ್ಟಡವೊಂದರ ಒಂದನೆ ಮಹಡಿಯಲ್ಲಿ ಈ ರಾಷ್ಟ್ರೀಕೃತ ಬ್ಯಾಂಕ್ ಕಾರ್ಯಾಚರಿಸುತ್ತಿದೆ. ಬ್ಯಾಂಕ್‌ನ ಕೆಳ ಅಂತಸ್ತಿನಲ್ಲಿ ಹಲವು ವ್ಯಾಪಾರ ಮಳಿಗೆಗಳು ಹಾಗೂ ಬಾಡಿಗೆ ಕೊಠಡಿಗಳಿವೆ. ಈ ಪೈಕಿ ಕೆಲ ಕಾರ್ಮಿಕರು ವಾಸವಿದ್ದ ಕೊಠಡಿಯಿಂದ ಮೇಲಂತಸ್ತಿಗೆ ರಂಧ್ರ ಕೊರೆದು ಬ್ಯಾಂಕ್‌ನ ಭದ್ರತಾ ಕೊಠಡಿಯಲ್ಲಿನ ಲಾಕರ್ ಒಡೆದು ಈ ಕಳವು ನಡೆಸಲಾಗಿದೆ. ಇದೇ ವೇಳೆ ಕೆಳ ಅಂತಸ್ತಿನಲ್ಲಿ ವಾಸವಾಗಿದ್ದ ನಾಲ್ವರು ನಾಪತ್ತೆಯಾಗಿದ್ದಾರೆ. ಇವರನ್ನು ಕೇಂದ್ರೀಕರಿಸಿ ತನಿಖೆ ನಡೆಯುತ್ತಿದೆ. ಶುಕ್ರವಾರದಿಂದ ರವಿವಾರದವರೆಗೆ ಬ್ಯಾಂಕ್‌ಗೆ ರಜೆ ಇತ್ತು. ಇಂದು ಬೆಳಗ್ಗೆ ಬ್ಯಾಂಕ್ ಸಿಬ್ಬಂದಿ ಬ್ಯಾಂಕ್‌ಗೆ ತಲುಪಿದಾಗ ಕೃತ್ಯ ಬೆಳಕಿಗೆ ಬಂದಿದೆ. ಸುದ್ದಿ ತಿಳಿಯುತ್ತಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎ.ಶ್ರೀನಿವಾಸ್, ಹೊಸದುರ್ಗ ಡಿವೈಎಸ್ಪಿ ಹರಿಶ್ಚಂದ್ರ ನಾಯಕ್ ಮತ್ತು ನೀಲೇಶ್ವರ, ಚಂದೇರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿದ್ದು, ಮಾಹಿತಿಯನ್ನು ಕಲೆ ಹಾಕಿದ್ದಾರೆ.
22 ದಿನಗಳ ಅವಧಿಯಲ್ಲಿ ಎರಡನೆ ಬ್ಯಾಂಕ್ ದರೋಡೆ !
22 ದಿನಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿರುವ ಎರಡನೆ ಬ್ಯಾಂಕ್‌ದರೋಡೆ ಪ್ರಕರಣ ಇದಾಗಿದೆ. ಸೆಪ್ಟಂಬರ್ 7ರಂದು ಎರಿಯಾಲ್ನಲ್ಲಿರುವ ಕೂಡ್ಲು ಸೇವಾ ಸಹಕಾರಿ ಬ್ಯಾಂಕ್ ಶಾಖೆಗೆ ಹಾಡಹಗಲೇ ನುಗ್ಗಿದ್ದ ದರೋಡೆಕೋರರು 21 ಕಿಲೋ ಚಿನ್ನ ಮತ್ತು 13 ಲಕ್ಷ ರೂ.ವನ್ನು ದೋಚಿದ್ದರು.
ಈ ಕೃತ್ಯದ ತನಿಖೆ ನಡೆಯುತ್ತಿರುವ ಬೆನ್ನಲ್ಲೇ ಚೆರ್ವತ್ತೂರಿನಲ್ಲಿ ಮತ್ತೊಂದು ಬ್ಯಾಂಕ್ ದರೋಡೆ ನಡೆದಿರುವುದು ಜಿಲ್ಲೆಯ ಜನತೆಯನ್ನು ಬೆಚ್ಚಿ ಬೀಳಿಸಿದೆ.
ನಾಲ್ವರ ಸುಳಿವು ಲಭ್ಯ: ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರ ಬಗ್ಗೆ ಪೊಲೀಸರಿಗೆ ಸುಳಿವು ಲಭಿಸಿದೆ ಎನ್ನಲಾಗಿದೆ. ಬ್ಯಾಂಕ್‌ನ ಕೆಳಗಡೆ ರೂಂ ಪಡೆದಿದ್ದ ಮಂಜೇಶ್ವರ ನಿವಾಸಿ ಹಾಗೂ ಹೊರ ರಾಜ್ಯದ ಕಾರ್ಮಿಕರನ್ನು ಕೇಂದ್ರೀಕರಿಸಿ ತನಿಖೆ ನಡೆಯುತ್ತಿದೆ. ನುರಿತ ದರೋಡೆಕೋರರೇ ಈ ಕೃತ್ಯ ನಡೆಸಿರಬಹುದು ಎಂದು ಶಂಕಿಸಲಾಗಿದೆ.
ತನಿಖೆಗೆ ವಿಶೇಷ ತಂಡ: ಪ್ರಕರಣದ ತನಿಖೆಗೆ ಕಾಸರಗೋಡು ಡಿವೈಎಸ್ಪಿ ಟಿ.ಪಿ.ರಂಜಿತ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ. ತಂಡವು ಶಂಕಿತರನ್ನು ಕೇಂದ್ರೀಕರಿಸಿ ತನಿಖೆ ನಡೆಸುತ್ತಿದೆ. ಈಗಾಗಲೇ ಕೆಲವೊಂದು ಮಾಹಿತಿಗಳು ಲಭಿಸಿರುವುದಾಗಿ ತನಿಖಾ ತಂಡದ ಮೂಲಗಳು ತಿಳಿಸಿವೆ . ಬ್ಯಾಂಕ್‌ನಿಂದ ಭದ್ರತಾ ಲೋಪ: ಎಸ್ಪಿ ಬ್ಯಾಂಕ್‌ನಿಂದ ಭದ್ರತಾ ಲೋಪ ಉಂಟಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎ.ಶ್ರೀನಿವಾಸ್‌ತಿಳಿಸಿದ್ದಾರೆ. ದರೋಡೆಗಳು ಹೆಚ್ಚುತ್ತಿದ್ದರೂ ಬ್ಯಾಂಕ್ ಅಧಿಕಾರಿಗಳು ಸೂಕ್ತ ಭದ್ರತೆ ವ್ಯವಸ್ಥೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಗಮನಹರಿಸಿಲ್ಲ. ಭದ್ರತೆ ಕುರಿತು ಆಯಾ ಬ್ಯಾಂಕ್‌ಗಳು ಸೂಕ್ತ ಕ್ರಮ ಕೈಗೊಳ್ಳಬೇಕಿದ್ದು, ಈ ಬಗ್ಗೆ ಎಲ್ಲಾ ಬ್ಯಾಂಕ್‌ಗಳಿಗೆ ಆದೇಶ ನೀಡಲಾಗಿದೆ ಎಂದು ಅವರು ತಿಳಿಸಿದರು.

Write A Comment