ರಾಷ್ಟ್ರೀಯ

‘ಆಸ್ಟ್ರೊಸ್ಯಾಟ್’ ಯಶಸ್ವಿ ಉಡಾವಣೆ: ಅಮೆರಿಕದ 4 ಸೇರಿದಂತೆ ಒಟ್ಟು 6 ವಿದೇಶಿ ಉಪಗ್ರಹಗಳ ಉಡಾವಣೆ

Pinterest LinkedIn Tumblr

ISHRO-finalಶ್ರೀಹರಿಕೋಟಾ, ಸೆ.28: ಭಾರತದ ಮೊತ್ತಮೊದಲ ಬಾಹ್ಯಾಕಾಶ ಸಂಶೋಧನಾ ವೀಕ್ಷಣಾಲಯ ‘ಆಸ್ಟ್ರೊಸ್ಯಾಟ್’ನ್ನು ಇಸ್ರೊ ಯಶಸ್ವಿ ಯಾಗಿ ಉಡಾವಣೆ ಮಾಡಿದೆ. ಸೋಮವಾರ ಬೆಳಗ್ಗೆ 10 ಗಂಟೆಗೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್‌ಎಲ್‌ವಿ ಸಿ-30 ಉಡ್ಡಯನ ನೌಕೆಯ ನೆರ ವಿನಿಂದ ‘ಆಸ್ಟ್ರೊಸ್ಯಾಟ್’ ಮತ್ತು ಇತರ ಆರು ಉಪಗ್ರಹಗಳನ್ನು ಉಡಾವಣೆ ಮಾಡಲಾಯಿತು.
ಉಡಾವಣೆಗೊಂಡ ಆರು ಉಪಗ್ರಹಗಳಲ್ಲಿ ಅಮೆರಿಕದ ನಾಲ್ಕು ಮತ್ತು ಕೆನಡ, ಇಂಡೋನೇಶ್ಯಗಳಿಗೆ ಸೇರಿದ ತಲಾ ಒಂದೊಂದು ಉಪಗ್ರಹಗಳು ಸೇರಿವೆ.
ಪಿಎಸ್‌ಎಲ್‌ವಿ ಉಡ್ಡಯನ ನೌಕೆಯು ಮೊದಲಿಗೆ ‘ಆಸ್ಟ್ರೊಸ್ಯಾಟ್’ನ್ನು 650 ಕಿ.ಮೀ. ಎತ್ತರದಲ್ಲಿರುವ ಬಾಹ್ಯಾಕಾಶ ಕಕ್ಷೆಗೆ ಸೇರಿಸಿತು. ನಂತರ ಮೂರು ನಿಮಿಷಗಳ ಅಂತರದಲ್ಲಿ ಉಳಿದ ಆರು ಉಪಗ್ರಹಗಳನ್ನು ಅವುಗಳ ನಿಗದಿತ ಕಕ್ಷೆಗಳಿಗೆ ಸೇರ್ಪಡೆ ಮಾಡಿತು.
‘ಆಸ್ಟ್ರೊಸ್ಯಾಟ್’ ಎಂಬುದು ಖಗೋಳ ವೀಕ್ಷಣಾಲಯವಾಗಿದ್ದು, ಸದ್ಯ ಅಮೆರಿಕ, ಜಪಾನ್, ರಶ್ಯ, ಐರೋಪ್ಯ ಒಕ್ಕೂಟದ ಬಳಿ ಮಾತ್ರ ಈ ಸೌಲಭ್ಯವಿದೆ. ‘ಆಸ್ಟ್ರೊಸ್ಯಾಟ್’ ಉಡಾವಣೆಯೊಂದಿಗೆ ಭಾರತವು ಈ ದೇಶಗಳ ಸಾಲಿಗೆ ಸೇರ್ಪಡೆಯಾದಂತಾಗಿದೆ.
‘ಆಸ್ಟ್ರೊಸ್ಯಾಟ್’ನಲ್ಲಿ ಎಕ್ಸ್-ರೇಗಳನ್ನು ಬಳಸುವ ಒಂದು ಟೆಲಿಸ್ಕೋಪ್ ಸೌಲಭ್ಯವಿದೆ. 1990ರಲ್ಲಿ ಅಮೆರಿಕದ ‘ನಾಸಾ’ವು ಉಡಾವಣೆ ಮಾಡಿದ್ದಂತಹ ಸಣ್ಣ ಪ್ರಮಾಣದ ಹಬಲ್ ಟೆಲಿಸ್ಕೋಪ್ ಇದಾಗಿದೆ. ಇದು ಆಕಾಶಕಾಯಗಳ ಅಧ್ಯಯನಕ್ಕೆ ನೆರವಾಗಲಿದೆ.
‘ಆಸ್ಟ್ರೊಸ್ಯಾಟ್’ನಲ್ಲಿ ಆಲ್ಟ್ರಾವೈಲಟ್ ಇಮೇಜಿಂಗ್ ಟೆಲಿಸ್ಕೋಪ್, ಲಾರ್ಜ್ ಏರಿಯಾ ಎಕ್ಸ್-ರೇ ಪ್ರೊಪೊರ್ಷನಲ್ ಕೌಂಟರ್, ಸಾಫ್ಟ್ ಎಕ್ಸ್-ರೇ ಟೆಲಿಸ್ಕೋಪ್ ಮತ್ತು ಕ್ಯಾಡಿಯಂ ಜಿಂಕ್ ಟೆಲ್ಯೂರೈಡ್ ಇಮೇಜರ್‌ನಂತಹ ಅತ್ಯಾಧುನಿಕ ಸೌಲಭ್ಯಗಳಿವೆ. ಇಸ್ರೊದ ಮಾಜಿ ಅಧ್ಯಕ್ಷ ಪ್ರೊ.ಯು.ಆರ್.ರಾವ್ ನೇತೃತ್ವದ ವಿಜ್ಞಾನಿಗಳ ತಂಡವೊಂದು ‘ಆಸ್ಟ್ರೊಸ್ಯಾಟ್’ನಲ್ಲಿ ಈ ವೈಜ್ಞಾನಿಕ ಉಪಕರಣಗಳ ಸೇರ್ಪಡೆಯನ್ನು ಅಂತಿಮಗೊಳಿಸಿದೆ.
ಪಿಎಸ್‌ಎಲ್‌ವಿ ನೆರವಿನಿಂದ ಉಡಾವಣೆಗೊಂಡಿರುವ ಖಗೋಳ ವೀಕ್ಷಣಾಲಯವನ್ನು ದೇಶದೊಳಗೆ ಮಾತ್ರವಲ್ಲ, ಜಾಗತಿಕ ಮಟ್ಟದಲ್ಲಿ ಬಹಳ ಕುತೂಹಲದಿಂದ ನೋಡಲಾಗುತ್ತಿದೆ. ಇದು ವಿಜ್ಞಾನಿಗಳ ಸಮುದಾಯಕ್ಕೆ ಹೊಸಹೊಸ ಮಾಹಿತಿಗಳನ್ನು ತಂದು ಕೊಡಲಿದೆ ಎಂದು ಇಸ್ರೊ ಅಧ್ಯಕ್ಷ ಎ.ಎಸ್.ಕಿರಣ್‌ಕುಮಾರ್ ಉಪಗ್ರಹ ಉಡಾವಣೆಯ ನಂತರ ಮಾತನಾಡುತ್ತ ಹೇಳಿದರು.
‘ಇಸ್ರೊ ಪಾಲಿಗೆ ಇಂದು ಮಹತ್ವದ ದಿನವಾಗಿದೆ. ಬಹಳ ಅತ್ಯುತ್ತಮವಾದ ಕೆಲಸ ಮಾಡಿರುವ ಇಸ್ರೊ ವಿಜ್ಞಾನಿಗಳ ಸಮುದಾಯಕ್ಕೆ ಅಭಿನಂದನೆಗಳು’ ಎಂದು ಅವರು ನುಡಿದರು.
‘ಆಸ್ಟ್ರೊಸ್ಯಾಟ್’ ನಿರ್ಮಾಣಕ್ಕೆ 27 ದಶಲಕ್ಷ ಡಾಲರ್ ವೆಚ್ಚವಾಗಿದೆ ಎಂದು ವರದಿಯಾಗಿದೆ. ಕಪ್ಪು ರಂಧ್ರಗಳು ಮತ್ತು ನಕ್ಷತ್ರಗಳ ಕಾಂತೀಯ ಕ್ಷೇತ್ರಗಳು ಸೇರಿದಂತೆ ಖಗೋಳದ ಭಾಗವನ್ನು ಅಧ್ಯಯನ ಮಾಡಿ ಭೂಮಿಗೆ ಮಾಹಿತಿಗಳನ್ನು ರವಾನಿಸಲಿದೆ.
***
ಬಹಳ ಒಳ್ಳೆಯ ಕೆಲಸವನ್ನು ಇಸ್ರೊ ಮಾಡಿದೆ. ಭಾರತೀಯ ವಿಜ್ಞಾನ ಮತ್ತು ವಿಜ್ಞಾನಿಗಳ ಮತ್ತೊಂದು ಮಹಾನ್ ಸಾಧನೆ ಇದಾಗಿದೆ.
( ಅಮೆರಿಕದಿಂದ ಪ್ರಧಾನಿ ನರೇಂದ್ರ ಮೋದಿ ಟ್ವೀಟ್)

Write A Comment