ಫರಿದಾಬಾದ್: ಸವರ್ಣೀಯರ ದಾಳಿಯಲ್ಲಿ ಇಬ್ಬರು ಮಕ್ಕಳು ಸಜೀವ ದಹನವಾದ ದಲಿತ ಕುಟುಂಬಕ್ಕೆ ಸಾಂತ್ವನ ನೀಡಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ಮೋದಿ, ಹರಿಯಾಣಾ ಸಿಎಂ, ಬಿಜೆಪಿ ಮತ್ತು ಆರೆಸ್ಸೆಸ್ ದುರ್ಬಲರ ಮೇಲೆ ವ್ಯವಸ್ಥಿತ ದಾಳಿ ನಡೆಸುವ ಹೇಯ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಪ್ರಧಾನಿ ಮೋದಿ, ಹರಿಯಾಣಾದ ಮುಖ್ಯಮಂತ್ರಿ ಕಟ್ಟರ್, ಬಿಜೆಪಿ ಮತ್ತು ಆರೆಸ್ಸೆಸ್ ನಿಲುವುಗಳು ಒಂದೇ ಆಗಿದ್ದು, ದುರ್ಬಲ ಸಮುದಾಯಗಳನ್ನು ತುಳಿಯುವುದಾಗಿದೆ. ಇಬ್ಬರು ಮಕ್ಕಳು ಸಜೀವವಾಗಿ ದಹನಗೊಂಡ ದಲಿತ ಕುಟುಂಬವೇ ಇದಕ್ಕೆ ಸಾಕ್ಷಿಯಾಗಿದೆ ಎಂದು ಕಿಡಿಕಾರಿದ್ದಾರೆ.
ಹಾಡಹಗಲೇ ಸವರ್ಣೀಯರು ದಲಿತ ವ್ಯಕ್ತಿಯೊಬ್ಬನ ಮನೆಗೆ ಬೆಂಕಿ ಹಚ್ಚಿದ್ದರಿಂದ, ಮನೆಯಲ್ಲಿದ್ದ ಇಬ್ಬರು ಮಕ್ಕಳು ಸಜೀವವಾಗಿ ದಹನಗೊಂಡಿದ್ದರು. ದಲಿತ ಕುಟುಂಬದ ಮನೆಗೆ ಸಾಂತ್ವನ ಹೇಳಲು ರಾಹುಲ್ ಭೇಟಿ ನೀಡಿದ್ದರು.
ಹರಿಯಾಣಾದಲ್ಲಿರುವ ಬಿಜೆಪಿ ನೇತೃತ್ವದ ಮನೋಹರ್ ಲಾಲ್ ಕಟ್ಟರ್ ನೇತೃತ್ವದ ಸರಕಾರ ಬಡವರ ಪರವಾಗಿಲ್ಲ. ಬಡವರನ್ನು, ಹಿಂದುಳಿದವರನ್ನು, ಶೋಷಿತರನ್ನು ಗುರಿಯಾಗಿಸುತ್ತಿದೆ. ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುವುದು ಸೇರಿದಂತೆ ನನ್ನ ಕೈಯಿಂದಾದ ನೆರವು ನೀಡುವುದಾಗಿ ರಾಹುಲ್ ದಲಿತ ಕುಟುಂಬಕ್ಕೆ ಭರವಸೆ ನೀಡಿದ್ದಾರೆ.