ಅಮರಾವತಿ: ಗುಂಟೂರು ಜಿಲ್ಲೆಯ ಗ್ರಾಮವೊಂದರಲ್ಲಿ ಆಂಧ್ರಪ್ರದೇಶದ ಅಮರಾವತಿ ರಾಜಧಾನಿಯ ಶಂಕುಸ್ಥಾಪನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ನಾಳೆ ನೆರವೇರಿಸಲಿದ್ದಾರೆ. ಸರಕಾರ ಮೆಗಾ ಕಾರ್ಯಕ್ರಮಕ್ಕೆ ಭಾರಿ ವ್ಯವಸ್ಥೆಯನ್ನು ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಕೃಷ್ಣ ನದಿ ದಂಡೆಯ ತೀರದಲ್ಲಿರುವ ಉದ್ದಾಂಡರಾಯನಿಪಲೇಮ್ ಗ್ರಾಮದಲ್ಲಿ ಶಂಕು ಸ್ಥಾಪನೆ ಕಾರ್ಯಕ್ರಮ ನೆರವೇರಲಿದ್ದು, ಕಾರ್ಯಕ್ರಮದಲ್ಲಿ ಸುಮಾರು 4 ರಿಂದ 5 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಸರಕಾರದ ಸಲಹೆಗಾರರಾದ ಪರಕಲಾ ಪ್ರಭಾಕರ್ ತಿಳಿಸಿದ್ದಾರೆ.
ಆಂದ್ರಪ್ರದೇಶದ ವಾಣಿಜ್ಯ ರಾಜಧಾನಿಯಾದ ವಿಜಯವಾಡಾದಿಂದ 40 ಕಿ.ಮೀ ದೂರದಲ್ಲಿರುವ ಗ್ರಾಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಲಿದ್ದು ಸುಮಾರು 90 ನಿಮಿಷಗಳ ಕಾಲ ಉಪಸ್ಥಿತರಿರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಧಾನಿ ಮೋದಿ ಅಮರಾವತಿ ರಾಜಧಾನಿಯ ಇತಿಹಾಸ, ಪುರಾಣ ಕಥೆಗಳು ಮತ್ತು ಸಾಂಸ್ಕ್ರತಿಕ ಮಾಹಿತಿಗಳುಳ್ಳ ಚಿತ್ರ ಪ್ರದರ್ಶನ ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ. ಅಮರಾವತಿ ಸಾತವಾಹನರ ಕಾಲದ ರಾಜಧಾನಿಯಾಗಿತ್ತು.
ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದ ಸರಕಾರ ಕೇಂದ್ರ ಸಚಿವರಿಗೆ, ಮುಖ್ಯಮಂತ್ರಿಗಳಿಗೆ, ರಾಜಕೀಯ ನಾಯಕರಿಗೆ, ಉದ್ಯಮಿಗಳು ಹಾಗೂ ವಿದೇಶಿ ಗಣ್ಯರಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿದೆ.