ನವದೆಹಲಿ, ಅ.22: ಯಾವನೋ ಒಬ್ಬ ಒಂದು ನಾಯಿಗೆ ಕಲ್ಲು ಹೊಡೆದರೆ ಅದಕ್ಕೆ ಸರ್ಕಾರ ಯಾವುದೇ ಜವಾಬ್ದಾರಿಯಲ್ಲ, ಇದು ಸಾಧಾರಣ ಮನುಷ್ಯನೊಬ್ಬ ಹೇಳಿದ ಮಾತಲ್ಲ. ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ ಹೆಸರು ಮಾಡುತ್ತಿರುವ ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಕೆ.ಸಿಂಗ್ ಅವರು ಉದುರಿಸಿದ ನುಡಿಮುತ್ತುಗಳು.
ಹರ್ಯಾಣದಲ್ಲಿ ಮೇಲ್ವರ್ಗದವರು ದಲಿತರ ಮನೆಯೊಂದಕ್ಕೆ ಬೆಂಕಿ ಹಚ್ಚಿ ಇಬ್ಬರು ಹಸುಮಕ್ಕಳನ್ನು ಸಜೀವವಾಗಿ ದಹಿಸಿದ ಅಮಾನವೀಯ ಘಟನೆಯನ್ನು ಖಂಡಿಸಿ ಇಡೀ ದೇಶ ವ್ಯಗ್ರವಾಗಿದ್ದರೆ ಕೇಂದ್ರ ಸಚಿವರು ಇಂತಹ ಹೇಳಿಕೆ ನೀಡಿರುವುದು ಸಾರ್ವಜನಿಕರನ್ನು ಕೆರಳಿಸಿದೆ. ಇಂತಹ ಘಟನೆಗಳನ್ನು ತಡೆಯುವಲ್ಲಿ ಸರ್ಕಾರ ವಿಫಲವಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ಸಿಂಗ್, ಇದನ್ನು ಸರ್ಕಾರಕ್ಕೆ ತಳುಕು ಹಾಕಬೇಡಿ, ಎರಡು ಕುಟುಂಬಗಳ ನಡುವಿನ ಮನಸ್ತಾಪದ ಫಲವಿದು. ಅದನ್ನು ಪೊಲೀಸರು ನೋಡಿಕೊಳ್ಳುತ್ತಾರೆ ಎಂದಿದ್ದಾರೆ.
ಅಲ್ಲಿ ಆಡಳಿತ ವಿಫಲವಾಗಿದೆ. ಎಂಬ ಕೂಗು ಕೇಳಿಬರುತ್ತಿದೆ. ಸಿಂಗ್ ಅವರ ಬಿಜೆಪಿ ಪಕ್ಷವೇ ಅಲ್ಲಿ ಆಡಳಿತದಲ್ಲಿದೆ. ಕಳೆದ ಸೋಮವಾರ ನಡೆದ ಘಟನೆಯಲ್ಲಿ ಗುಂಪೊಂದು ದಲಿತನೊಬ್ಬನ ಮನೆಗೆ ಬೆಂಕಿ ಹಚ್ಚಿತ್ತು.. ಆ ದುರಂತದಲ್ಲಿ ಎರಡೂವರೆ ವರ್ಷ ಹಾಗೂ 9 ತಿಂಗಳ ಪುಟ್ಟ ಮಕ್ಕಳಿಬ್ಬರು ಜೀವಂತ ಬೆಂದು ಹೋಗಿ, ತಾಯಿ-ತಂದೆ ಸುಟ್ಟ ಗಾಯಗಳಿಂದ ನರಳುತ್ತಾ, ಜೀವನ್ಮರಣ ಸ್ಥಿತಿಯಲ್ಲಿದ್ದಾರೆ.