ಅಮರಾವತಿ(ಆಂಧ್ರಪ್ರದೇಶ),ಅ.22: ವಿಭಜಿತ ಆಂಧ್ರ ಪ್ರದೇಶದ ನೂತನ ರಾಜಧಾನಿ ಅಮರಾವತಿ ಹೈಟೆಕ್‌ನಗರ ನಿರ್ಮಾಣಕ್ಕೆ ಉದ್ದಂಡರಾಯುನಿಪಾಲೆಂ ಎಂಬ ಗ್ರಾಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಶಂಕುಸ್ಥಾಪನೆ ನೆರವೇರಿಸಿದರು.
ಗುಂಟೂರು ಮತ್ತು ವಿಜಯವಾಡ ಜಿಲ್ಲೆಗಳ ನಡುವಿನ ವಿಶಾಲವಾದ ಪ್ರದೇಶದಲ್ಲಿ ಅತ್ಯಾಧುನಿಕ ರಾಜಧಾನಿ ನಗರದ ನಿರ್ಮಾಣ ಕಾರ್ಯಕ್ಕೆ ಆಯುಧ ಪೂಜೆ ದಿನವಾದ ಇಂದು ಚಾಲನೆ ನೀಡಲಾಯಿತು. ವಿಶೇಷ ಹೆಲಿಕಾಪ್ಟರ್‌ನಲ್ಲಿ ಇಲ್ಲಿಗೆ ಆಗಮಿಸಿದ ಪ್ರಧಾನಿ ಯನ್ನು ಆಂಧ್ರದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ಕೇಂದ್ರ ಸಚಿವ ವೆಂಕಯ್ಯನಾಯ್ಡು, ರಾಜ್ಯಪಾಲ ನರ ಸಿಂಹನ್, ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಮತ್ತಿತರ ಗಣ್ಯರು ಹಾರ್ದಿಕವಾಗಿ ಬರಮಾಡಿಕೊಂಡರು.
ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಮತ್ತು ಚಂದ್ರಬಾಬು ನಾಯ್ಡು ಪ್ರಧಾನಿಗೆ ಶಾಲು ಹೊದಿಸಿ ಗೌರವಿಸಿದರು. ನಿಗದಿತ ಕಾರ್ಯಕ್ರಮದಂತೆ 12.45ಕ್ಕೆ ಸರಿಯಾಗಿ ಮೋದಿ ನಗರ ನಿರ್ಮಾಣದ ಅಡಿಗಲ್ಲು ಹಾಕಿದರು. ತಾಲಿವುಡ್‌ನ ಖ್ಯಾತ ನಟರಾದ ಬಾಲಕೃಷ್ಣ ಸೇರಿದಂತೆ ಅನೇಕ ನಟನಟಿಯು ಭಾಗಿಯಾಗಿದ್ದರು. ಆದರೆ ಪವರ್ ಸ್ಟಾರ್ ಪವನ್ ಕಲ್ಯಾಣ್ ಮಾತ್ರ ಗೈರು ಹಾಜರಾಗಿದ್ದರು.
ರಾಜಧಾನಿ ನಗರವನ್ನು ರಾಜ್ಯದ 14 ಸಾವಿರ ಹಳ್ಳಿಗಳ ಮಣ್ಣು ಮತ್ತು ನೀರು ತರಿಸಿ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಸಿಂಗಾಪುರ ಮಾದರಿಯಲ್ಲಿ ಈ ನಗರ ನಿರ್ಮಾಣ ವಾಗುತ್ತಿದ್ದು, ಜನವಸತಿ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಅವರು ಹೇಳಿದ್ದಾರೆ. ಕಾರ್ಯಕ್ರಮಕ್ಕೆ ಮುನ್ನ ಈ ರಾಜಧಾನಿ ನಗರದಲ್ಲಿ ನೆಲೆಸುವ ಪ್ರತಿಯೊಬ್ಬರಿಗೂ ಭಗವಂತ ಒಳ್ಳೆಯದನ್ನು ಮಾಡಲಿ ಎಂದು ಹಾರೈಸಿ ಹೋಮ ಹವನಾದಿಗಳನ್ನು ನೆರವೇರಿಸಲಾಯಿತು. 217 ಕಿ.ಮೀ ವ್ಯಾಪ್ತಿಯಲ್ಲಿ ದೇವೇಂದ್ರನ ಅಮರಾವತಿ ಯನ್ನು ಮೀರಿಸುವ ಆಂಧ್ರದ ರಾಜಧಾನಿ ಅಮರಾವತಿ ನಿರ್ಮಾಣವಾಗಲಿದೆ.