ರಾಷ್ಟ್ರೀಯ

ಕುಂಭದ್ರೋಣ ಮಳೆಗೆ ತತ್ತರಿಸಿರುವ ಚೆನ್ನೈ ಮಹಾನಗರ : 46 ಲಕ್ಷಕ್ಕೂ ಹೆಚ್ಚು ಜನ ಅತಂತ್ರ ; ಸಾಂಕ್ರಾಮಿಕ ರೋಗದ ಭೀತಿ

Pinterest LinkedIn Tumblr

chennai rain  (4)

* ಶತಮಾನದಲ್ಲಿ ಕಂಡರಿಯದ ಮಳೆ
* 46 ಲಕ್ಷಕ್ಕೂ ಹೆಚ್ಚು ಜನರು ಅತಂತ್ರ
* ಸೇನಾಪಡೆಯಿಂದ ಹೈ ರಿಸ್ಕ್ ಆಪರೇಷನ್‌ಗೆ 1500 ಸಿಬ್ಬಂದಿ
* ಮೂರು ಸೇನಾ ವಿಭಾಗಗಳಿಂದ ಸಮರೋಪಾದಿ ಕಾರ್ಯಾಚರಣೆ
* ವಿಮಾನ ನಿಲ್ದಾಣದಲ್ಲಿ ಸಿಕ್ಕಿಹಾಕಿಕೊಂಡ 3500 ಜನ
* ಕರಾವಳಿಯಲ್ಲಿ ಗಂಭೀರ ಪರಿಸ್ಥಿತಿ
* 62 ಸಾವಿರ ಜನರ ರಕ್ಷಣೆ
* ಆರು ಚೇತಕ್ ಹೆಲಿಕಾಪ್ಟರ್‌ಗಳಿಂದ ಕಾರ್ಯಾಚರಣೆ
* ಮುಖ್ಯಮಂತ್ರಿ ಜಯಲಲಿತಾ ಅವರಿಂದ ವೈಮಾನಿಕ ಸಮೀಕ್ಷೆ
* ಎಲ್ಲ ಡ್ಯಾಮ್‌ಗಳಿಂದ 50 ಕ್ಯೂಸೆಕ್ಸ್ ನೀರು ಹೊರಕ್ಕೆ
* ಪ್ರವಾಹದಲ್ಲಿ ಸಿಲುಕಿರುವ ಜನರಿಗೆ ಜಲಚರಗಳ ಭೀತಿ
* ಡಿ.6ರ ವರೆಗೆ ವಿಮಾನ ಸೇವೆ ಸ್ಥಗಿತ, ನಿಲ್ದಾಣಗಳು ಬಂದ್, ಎಲ್ಲ ಅಗತ್ಯ ನೆರವಿಗೆ ಕೇಂದ್ರ ಸನ್ನದ್ಧ
* ಚೆನ್ನೈ, ತಿರುವಳ್ಳುವರ್, ಕಾಂಚಿಪುರ, ಕಡಲೂರು ಜರ್ಝರಿತ

ಚೆನ್ನೈ, ಡಿ.3: ಶತಮಾನದಲ್ಲಿ ಕಂಡರಿಯದ ಮಳೆಯಿಂದ ತತ್ತರಿಸಿರುವ ಚೆನ್ನೈ ಮಹಾನಗರದಲ್ಲಿ 46 ಲಕ್ಷಕ್ಕೂ ಹೆಚ್ಚು ಜನ ಅತಂತ್ರರಾಗಿದ್ದು, ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು, ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.

ಸೇನಾಪಡೆಯಿಂದ ಹೈ ರಿಸ್ಕ್ ಆಪರೇಷನ್ ಆರಂಭವಾಗಿದ್ದು, ಸುಮಾರು 1500 ಸಿಬ್ಬಂದಿ ಗರಿಷ್ಠ ಪ್ರಮಾಣದಲ್ಲಿ ನಗರದಿಂದ ನೀರನ್ನು ಹೊರಹಾಕುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಡಿ.6ರ ವರೆಗೆ ವಿಮಾನ ಸೇವೆಯನ್ನು ಸ್ಥಗಿತಗೊಳಿಸಿದ್ದು, ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ. ಎಲ್ಲ ಅಗತ್ಯ ನೆರವು ನೀಡುವುದಾಗಿ ಕೇಂದ್ರ ಭರವಸೆ ನೀಡಿದೆ. 3500ಕ್ಕೂ ಹೆಚ್ಚು ಜನ ವಿಮಾನ ನಿಲ್ದಾಣದಲ್ಲಿ ಸಿಲುಕಿದ್ದು, ಅವರನ್ನು ಹೈದರಾಬಾದ್‌ಗೆ ಮತ್ತು ಬೆಂಗಳೂರಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ.

ಈವರೆಗೂ 62 ಸಾವಿರ ಜನರನ್ನು ರಕ್ಷಿಸಿ ಸುರಕ್ಷತಾ ಸ್ಥಳಗಳಿಗೆ ಕೊಂಡೊಯ್ಯಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಎನ್‌ಡಿಆರ್‌ಎಫ್‌ನ 25 ತಂಡಗಳು, ಸೇನೆ, ಪೊಲೀಸರು, ಅಗ್ನಿಶಾಮಕ ದಳ, ಸ್ವಯಂ ಸೇವಕರು, ರಾಜಕೀಯ ಪಕ್ಷಗಳ ಕಾರ್ಯಕರ್ತರು ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ. ಮುಖ್ಯಮಂತ್ರಿ ಜಯಲಲಿತಾ ಚೆನ್ನೈ, ಕಾಂಚೀಪುರಂ, ತಿರುವಳ್ಳೂರ್ ಜಿಲ್ಲೆಗಳ ವೈಮಾನಿಕ ಸಮೀಕ್ಷೆ ನಡೆಸಿದರು.

ಜಲಮಯವಾಗಿರುವ ಚೆನ್ನೈ ಪ್ರದೇಶದಿಂದ ಜನರನ್ನು ಹೊರತರಲು ಹರಸಾಹಸ ಪಡಲಾಗುತ್ತಿದೆ. 250ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದ್ದರೂ ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.

ಮತ್ತೆ ಮೂರು ದಿನಗಳ ಕಾಲ ಮಳೆ ಮುಂದುವರೆಯಲಿರುವುದರಿಂದ ಚೆನ್ನೈನ ಜನತೆ ಆತಂಕಕ್ಕೊಳಗಾಗಿದ್ದಾರೆ. ಜನರ ಬದುಕು ದುಸ್ತರವಾಗಿದ್ದು, ಅನ್ನ, ಆಹಾರಕ್ಕಾಗಿ ಹಾಹಾಕಾರ ಶುರುವಾಗಿದೆ. ಕರಾವಳಿಯಲ್ಲಿ ಗಂಭೀರ ಪರಿಸ್ಥಿತಿ ಎದುರಾಗಿದೆ.

ಶಾಲಾ-ಕಾಲೇಜುಗಳಿಗೆ ನೀಡಿದ್ದ ರಜೆಯನ್ನು ಮುಂದುವರೆಸಲಾಗಿದ್ದು, ಹಲವು ಶಾಲೆಗಳಿಗೆ ನೀರು ನುಗ್ಗಿದೆ. ಸರ್ಕಾರಿ ಕಚೇರಿಗಳು ಜಲಾವೃತಗೊಂಡಿರುವುದರಿಂದ ದಾಖಲೆಗಳು, ಕಾಗದ-ಪತ್ರಗಳು, ಕಡತಗಳು ನೀರಿನಲ್ಲಿ ಕೊಚ್ಚಿಹೋಗಿವೆ. ಲಕ್ಷಾಂತರ ಜನ ಮನೆ-ಮಠ ಕಳೆದುಕೊಂಡು ನೆರವಿಗಾಗಿ ಮೊರೆಯಿಟ್ಟಿದ್ದಾರೆ. ಭಾರೀ ಮಳೆಯಿಂದ ಎಲ್ಲ ಒಳಚರಂಡಿಗಳು ತುಂಬಿ ಹರಿಯುತ್ತಿದ್ದು, ನಗರದ ಹಲವೆಡೆ ಗಬ್ಬು ವಾಸನೆ ಹರಡಿದೆ. ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಮಕ್ಕಳು ಸೇರಿದಂತೆ ನಾಗರಿಕರ ಆಕ್ರಂದನ ಮುಗಿಲು ಮುಟ್ಟಿದೆ. ವಾಯುಪಡೆಯ ಆರು ಚೇತಕ್ ಹೆಲಿಕಾಪ್ಟರ್‌ಗಳು ರಕ್ಷಣಾ ಕಾರ್ಯ ನಿರ್ವಹಿಸುತ್ತಿವೆ. ಗಂಜಿ ಕೇಂದ್ರಗಳಿಗೆ ಜನರನ್ನು ಕಾರ್ಯಪಡೆ ಕೊಂಡೊಯ್ಯುತ್ತಿದೆ. ತಮಿಳುನಾಡು ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿರುವ ಎನ್‌ಸಿಎನ್‌ಸಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಪುಟ ಕಾರ್ಯದರ್ಶಿ ವಿ.ಕೆ.ಸಿಂಗ್‌ನ ನಿರ್ದೇಶಕ ಕಾರ್ಯದರ್ಶಿ ರಾಜು ಮಹರ್ಷಿ ಅವರು ಅಗತ್ಯ ನೆರವು ನೀಡುತ್ತಿದ್ದಾರೆ.

ಬೆಂಗಳೂರಿನಿಂದಲೂ ಸೇನಾಪಡೆ ಯೋಧರನ್ನು ರಕ್ಷಣಾ ಕಾರ್ಯಕ್ಕೆ ರವಾನಿಸಲಾಗಿದೆ. ಮಳೆಯ ರುದ್ರ ನರ್ತನಕ್ಕೆ ಚೆನ್ನೈ, ತಿರುವಳ್ಳುವರ್, ಕಾಂಚಿಪುರಂ, ಕಡಲೂರು ಜರ್ಝರಿತವಾಗಿದೆ. ಎಲ್ಲ ಡ್ಯಾಮ್‌ಗಳಿಂದ ನೀರನ್ನು ಹೊರಬಿಡಲಾಗುತ್ತಿದೆ. ಪ್ರವಾಹದಲ್ಲಿ ಸಿಲುಕಿರುವ ಜನಕ್ಕೆ ಜಲಚರ ಪ್ರಾಣಿಗಳ ಭೀತಿ ಎದುರಾಗಿದೆ. ಮೊಸಳೆಗಳು ನೀರಿನಲ್ಲಿ ಹರಿದಾಡುತ್ತಿವೆ ಎಂಬ ಸುದ್ದಿ ಭೀತಿಗೊಂಡ ಜನರಲ್ಲಿ ಮತ್ತಷ್ಟು ಭಯ ಮೂಡಿಸಿತ್ತು.

ಕಾಲರಾ ಭೀತಿ:
ನಿಂತ ನೀರು ಹೆಚ್ಚು ಅಪಾಯಕಾರಿಯಾಗಿದ್ದು, ಕಳೆದ ಒಂದು ತಿಂಗಳಿನಿಂದಲೂ ಮಳೆ ಸುರಿಯುತ್ತಿದ್ದು, ಜಲಾವೃತಗೊಂಡಿರುವ ಪ್ರದೇಶದಿಂದ ನೀರನ್ನು ಬೇಗ ಹೊರಹಾಕದಿದ್ದರೆ ಸಾಂಕ್ರಾಮಿಕ ರೋಗಗಳು ಎದುರಾಗಲಿವೆ ಎಂದು ಸಾರ್ವಜನಿಕ ಆರೋಗ್ಯ ಇಲಾಖೆ ನಿರ್ದೇಶಕ ಡಾ.ಇಳಂಗೋವ ಆತಂಕ ವ್ಯಕ್ತಪಡಿಸಿದ್ದಾರೆ. ನೀರನ್ನು ಬೇಗ ಹೊರಹಾಕದಿದ್ದರೆ ಕಾಲರಾ, ಮಲೇರಿಯಾ, ರಕ್ತ ಹೀನತೆಯಂತಹ ಕಾಯಿಲೆಗಳು ಬೇಗ ಹರಡುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಆರೋಗ್ಯ ಇಲಾಖೆ ಕೂಡ ಸಂಭಾವ್ಯ ಸಾಂಕ್ರಾಮಿಕ ರೋಗಗಳ ತಡೆಗೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ.

Write A Comment