ರಾಷ್ಟ್ರೀಯ

ಸಹೋದರರ ಹತ್ಯೆ: ಮಾಜಿ ಸಂಸದನಿಗೆ ಜೀವಾವಧಿ

Pinterest LinkedIn Tumblr

shahabuddin

ಪಾಟ್ನ, ಡಿ..12: ಬಿಹಾರದ ಸಿವಾನ್ ಜಿಲ್ಲೆಯಲ್ಲಿ 11 ವರ್ಷಗಳ ಹಿಂದೆ ನಡೆದ ಇಬ್ಬರು ಸಹೋದರರ ಅಪಹರಣ ಮತ್ತು ಹತ್ಯೆ ಪ್ರಕರಣದಲ್ಲಿ ರಾಷ್ಟ್ರೀಯ ಜನತಾ ದಳದ ಮಾಜಿ ಸಂಸದ ಮುಹಮ್ಮದ್ ಶಹಾಬುದ್ದೀನ್‌ಗೆ ವಿಶೇಷ ನ್ಯಾಯಾಲಯವೊಂದು ಶುಕ್ರವಾರ ಜೀವಾವಧಿ ಶಿಕ್ಷೆ ವಿಧಿಸಿದೆ.

ಶಹಾಬುದ್ದೀನ್ ಮತ್ತು ಇತರ ಮೂವರು ಆರೋಪಿಗಳಾದ ರಾಜ್‌ಕುಮಾರ್ ಸಾಹ್, ಶೇಖ್ ಅಸ್ಲಂ ಮತ್ತು ಆರಿಫ್ ಹುಸೈನ್ ತಪ್ಪಿತಸ್ಥರು ಎಂಬುದಾಗಿ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಅಜಯ್ ಕುಮಾರ್ ಶ್ರೀವಾಸ್ತವ ಬುಧವಾರ ತೀರ್ಪು ನೀಡಿದ್ದರು.ಶಹಾಬುದ್ದೀನ್ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿದ್ದು, ಆತನನ್ನು ಕಳೆದ ಹಲವಾರು ವರ್ಷಗಳಿಂದ ಸಿವಾನ್ ಸೆಂಟ್ರಲ್ ಜೈಲಿನಲ್ಲಿ ಇರಿಸಲಾಗಿದೆ.

ತನ್ನ ಇಬ್ಬರು ಮಕ್ಕಳನ್ನು ಶಹಾಬುದ್ದೀನ್‌ನ ಮೂವರು ಬಂಟರು ಅಪಹರಿಸಿ ಹತ್ಯೆಗೈದಿದ್ದಾರೆ ಎಂಬುದಾಗಿ ಬಲಿಪಶುಗಳ ತಾಯಿ ಕಲಾವತಿ ದೇವಿ ದೂರು ದಾಖಲಿಸಿದ್ದರು.

ಚಂದ್ರಶೇಖರ್ ಪ್ರಸಾದ್ ಎಂಬವರ ಮೂವರು ಪುತ್ರರನ್ನು ಗೋಶಾಲಾ ರಸ್ತೆಯಲ್ಲಿರುವ ಅವರ ಮನೆಯಿಂದ ರಾಜ್‌ಕುಮರ್ ಸಾಹ್, ಶೇಖ್ ಅಸ್ಲಂ ಮತ್ತು ಆರಿಫ್ ಹುಸೈನ್ ಎಂಬವರು 2004 ಆಗಸ್ಟ್ 16ರಂದು ಅಪಹರಿಸಿ ಪ್ರತಾಪ್‌ಪುರ್ ಗ್ರಾಮಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಅವರ ಪೈಕಿ ಗಿರೀಶ್ ಮತ್ತು ಸತೀಶ್ ಮೇಲೆ ಆ್ಯಸಿಡ್ ಸುರಿದು ಹತ್ಯೆ ಮಾಡಲಾಗಿದೆ ಎಂದು ಪ್ರಾಸಿಕ್ಯೂಶನ್ ಆರೋಪಿಸಿದೆ.

ಅವರ ಪೈಕಿ ಒಬ್ಬ ರಾಜೀವ್ ರೋಶನ್ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಇಬ್ಬರ ಮೃತದೇಹಗಳನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಮಾಜಿ ಆರ್‌ಜೆಡಿ ಸಂಸದನ ಹೆಸರು ತನಿಖೆಯಲ್ಲಿ ಪ್ರಸ್ತಾಪವಾಯಿತು. ಮೂವರು ಸಹೋದರರ ಅಪಹರಣಕ್ಕೆ ಪಿತೂರಿ ರೂಪಿಸಿದ ಪ್ರಕರಣದಲ್ಲಿ ಆತನನ್ನು ಆರೋಪಿಯನ್ನಾಗಿಸಲಾಯಿತು.

ಬದುಕುಳಿದ ಸಹೋದರ ಪ್ರಕರಣದ ಪ್ರತ್ಯಕ್ಷದರ್ಶಿ ಸಾಕ್ಷಿಯಾಗಿ ನ್ಯಾಯಾಧೀಶರ ಮುಂದೆ ಹಾಜರಾಗಿದ್ದರು. ಆದರೆ, ಅವರನ್ನು 2014 ಜೂನ್ 16ರಂದು ಅಜ್ಞಾತ ಹಂತಕರು ಹತ್ಯೆ ಮಾಡಿದ್ದಾರೆ.

Write A Comment