ರಾಷ್ಟ್ರೀಯ

ಪಾರ್ಕ್‌ಸ್ಟ್ರೀಟ್ ಅತ್ಯಾಚಾರ ಪ್ರಕರಣ ಮೂವರಿಗೆ ಹತ್ತು ವರ್ಷ ಜೈಲು ಶಿಕ್ಷೆ

Pinterest LinkedIn Tumblr

jail

ಕೋಲ್ಕತಾ,ಡಿ.12:ಮೂರು ವರ್ಷಗಳ ಹಿಂದೆ ನಗರದ ಪಾರ್ಕ್‌ಸ್ಟ್ರೀಟ್ ರಸ್ತೆಯಲ್ಲಿ 37 ವರ್ಷ ವಯಸ್ಸಿನ ಮಹಿಳೆಯೊಬ್ಬರನ್ನು ಚಲಿಸುತ್ತಿರುವ ಕಾರೊಂದರಲ್ಲಿ ಅತ್ಯಾಚಾರಗೈದ ಮೂವರಿಗೆ ಸ್ಥಳೀಯ ನ್ಯಾಯಾಲಯವು ಶುಕ್ರವಾರ 10 ವರ್ಷಗಳ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿದೆ.

ಈ ಪ್ರಕರಣದ ಆರೋಪಿಗಳಾದ ಸುಮಿತ್ ಬಜಾಜ್, ರುಮನ್ ಖಾನ್ ಹಾಗೂ ನಾಸೀರ್ ಖಾನ್ ಅವರನ್ನು ದೋಷಿಗಳೆಂದು ನ್ಯಾಯಾಲಯ ಗುರುವಾರ ತೀರ್ಪು ನೀಡಿದ್ದು, ಇಂದು ಅವರಿಗೆ ಶಿಕ್ಷೆಯ ಪ್ರಮಾಣವನ್ನು ಘೋಷಿಸಿತು.

ಅತ್ಯಾಚಾರಕ್ಕೊಳಗಾದ ಮಹಿಳೆ ಸುಝೆಟ್ ಜೋರ್ಡಾನ್, ತನಗಾದ ಪರಿಸ್ಥಿತಿ ಇನ್ನಾವ ಮಹಿಳೆಗೂ ಬರಬಾರದೆಂಬ ಉದ್ದೇಶದಿಂದ ತನ್ನ ಗುರುತನ್ನು ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಸುದೀರ್ಘ ಸಮಯದ ಕಾನೂನು ಹೋರಾಟ ನಡೆಸಿದ ಅವರು ಈ ವರ್ಷದ ಮಾರ್ಚ್‌ನಲ್ಲಿ ಬಹುಅಂಗಾಂಗ ವೈಫಲ್ಯದಿಂದಾಗಿ ನಿಧನರಾಗಿದ್ದರು.

ಒಂದು ವೇಳೆ ಅಪರಾಧಿಗಳು ದಂಡವನ್ನು ಪಾವತಿಸಲು ವಿಫಲರಾದಲ್ಲಿ ಅವರ ಶಿಕ್ಷೆಯ ಅವಧಿಯನ್ನು ಇನ್ನೂ ಆರು ತಿಂಗಳು ಹೆಚ್ಚಿಸಬೇಕೆಂದು ನ್ಯಾಯಮೂರ್ತಿ ಚಿರಂಜೀವ್ ಭಟ್ಟಾಚಾರ್ಯ ತೀರ್ಪಿನಲ್ಲಿ ತಿಳಿಸಿದ್ದಾರೆ. ದೋಷಿಗಳ ಪೈಕಿ ರುಮಾನ್ ಖಾನ್ ಹಾಗೂ ನಾಸೀರ್‌ಖಾನ್‌ಗೆ ಹೆಚ್ಚುವರಿ ಆರು ತಿಂಗಳುಗಳ ಜೈಲು ವಾಸ ಹಾಗೂ 35 ಸಾವಿರ ರೂ. ದಂಡವನ್ನು ಕೂಡಾ ವಿಧಿಸಲಾಗಿದೆ. ಅಪರಾಧಿಗಳಿಗೆ ಶಿಕ್ಷೆಯನ್ನು ಘೋಷಿಸುವ ಮೊದಲು ನ್ಯಾಯಾಧೀಶರು ಸಂತ್ರಸ್ತೆ ಹಾಗೂ ಆರೋಪಿ ಪರ ವಕೀಲರುಗಳ ವಾದಪ್ರತಿವಾದಗಳನ್ನು ಆಲಿಸಿದರು.

ಇಬ್ಬರು ಮಕ್ಕಳ ತಾಯಿಯಾದ ಸುಝೆಟ್ ಜೋರ್ಡಾನ್, 2012ರ ಫೆಬ್ರವರಿ 6ರಂದು ಕೋಲ್ಕತಾದ ಪಾರ್ಕ್‌ಸ್ಟ್ರೀಟ್‌ನ ನೈಟ್‌ಕ್ಲಬ್ಬೊಂದರಲ್ಲಿ ಪರಿಚಯ ಮಾಡಿಕೊಂಡ ಆರೋಪಿಗಳು, ಆಕೆಯನ್ನು ಕಾರಿನಲ್ಲಿ ಕೊಂಡೊಯ್ದು ಅಚ್ಯಾಚಾರವೆಸಗಿದ್ದರು. ಪ್ರಕರಣದ ಪ್ರಮುಖ ಆರೋಪಿ ಖಾದರ್‌ಖಾನ್ ಸೇರಿದಂತೆ ಇನ್ನಿಬ್ಬರು ಈಗಲೂ ತಲೆಮರೆಸಿಕೊಂಡಿದ್ದಾರೆ.

Write A Comment