ಅಂತರಾಷ್ಟ್ರೀಯ

ಡೆಂಘೀಗೆ ಅಂಕುಶ ಹಾಕುವ ಲಸಿಕೆ ಸಿಕ್ಕಿತು !

Pinterest LinkedIn Tumblr

mosquito

ಲಂಡನ್: ಜಗತ್ತನ್ನೇ ತಲ್ಲಣಗೊಳಿಸಿರುವ ಅದರಲ್ಲೂ ಭಾರತದಾದ್ಯಂತ ಸಹಸ್ರಾರು ಬಲಿ ತೆಗೆದುಕೊಂಡ ಡೆಂಘೀಗೆ ಕೊನೆಗೂ ಲಸಿಕೆ ಸಿಕ್ಕಿದೆ. ಡೆಂಘೀ ಗುಣಪಡಿಸುವ ಔಷಧವನ್ನು ಮೆಕ್ಸಿಕೋದಲ್ಲಿ ಕಂಡುಹಿಡಿಯಲಾಗಿದೆ ಎಂದು ‘ಬಿಬಿಸಿ’ ವರದಿ ಮಾಡಿದೆ.

ಡೆಂಘೀ ಸೊಳ್ಳೆಗಳು ಪ್ರತಿವರ್ಷ 22 ಸಾವಿರ ಮಂದಿಯ ಜೀವ ಆಪೋಶನ ತೆಗೆದುಕೊಳ್ಳುತ್ತವೆ ಎಂಬುದನ್ನು ವಿಶ್ವ ಆರೋಗ್ಯ ಸಂಸ್ಥೆಯೇ ಖಚಿತ ಪಡಿಸಿತ್ತು. ಈ ಲಸಿಕೆಯಿಂದ ಈ ಸಂಖ್ಯೆ ಗಣನೀಯ ಇಳಿಯಲಿದೆ ಎಂದು ಮೆಕ್ಸಿಕೋದ ಆರೋಗ್ಯ ಸಚಿವಾಲಯ ಹೇಳಿದೆ. 20 ವರ್ಷಗಳ ಪ್ರಯತ್ನದಿಂದಾಗಿ ಡೆಂಘ್‍ವಾಕ್ಸಿಯಾ ಎಂಬ ಲಸಿಕೆ ಕಂಡುಹಿಡಿದಿರುವುದಾಗಿ ಸ್ಯನೋಫಿ ಎಂಬ ಫ್ರಾನ್ಸ್ ಮೂಲದ ಔಷಧಿ ಕಂಪನಿ ಹೇಳಿಕೊಂಡಿದೆ. ಮೊದಲ ಹಂತದಲ್ಲಿ ಮೆಕ್ಸಿಕೋದ 40 ಸಾವಿರ ಡೆಂಘೀ ಪೀಡಿತರಿಗೆ ಲಸಿಕೆ ನೀಡಲಿದೆ.

ಸೀಮಿತ ಬಳಕೆ: ವಿಶ್ವಾದ್ಯಂತ ಪ್ರತಿವರ್ಷ 40ಕೋಟಿ ಜನರು ಡೆಂಘೀ ಪೀಡಿತರಾಗುತ್ತಿದ್ದಾರೆ. ಹೊಸ ಲಸಿಕೆಯನ್ನು 9 ವರ್ಷ ಮೇಲ್ಪಟ್ಟವರು ಹಾಗೂ 49 ವರ್ಷ ಒಳಗಿನವರಿಗೆ ಮಾತ್ರ ಮೀಸಲಿಡಲಾಗಿದ್ದು, ಪದೇ ಪದೆ ಈ ಕಾಯಿಲೆ ಕಾಣಿಸಿಕೊಳ್ಳುವ ಪ್ರದೇಶಗಳಲ್ಲಿ ಮಾತ್ರ ಬಳಸಲು ನಿರ್ಧರಿಸಲಾಗಿದೆ. 4 ಮಾದರಿಯ ಡೆಂಘೀ ವೈರಸ್‍ಗಳನ್ನು ಇದು ನಿಷ್ಕ್ರಿಯಗೊಳಿಸಲಿದೆಯಂತೆ. ಕಳೆದ 20 ವರ್ಷಗಳಲ್ಲಿ ಈ ಲಸಿಕೆ ತಯಾರಿಕೆಗೆ ತಗುಲಿರುವ ಖರ್ಚು ಬರೋಬ್ಬರಿ ರು.10400ಕೋಟಿ. ಚಿಕೂನ್ ಗುನ್ಯಾ, ಝಿಕಾ ಜ್ವರ, ಡೆಂಘೀ ಎಲ್ಲವನ್ನೂ ಹರಡುವ ಈಡೆಸ್ ಈಜಿಪ್ಟಿ ಎಂಬ ಸೊಳ್ಳೆ ಕಳೆದ 65 ವರ್ಷಗಳಿಂದ ವೈದ್ಯರು ಮತ್ತು ವಿಜ್ಞಾನಿಗಳಿಗೆ ಸವಾಲಾಗಿಯೇ ಇತ್ತು.

Write A Comment