ರಾಷ್ಟ್ರೀಯ

ಜಿಎಸ್‌ಟಿ ಜಾರಿಗೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಅಡ್ಡಿ : ನಡೆಯದ ಸದನ

Pinterest LinkedIn Tumblr

loka

ನವದೆಹಲಿ, ಡಿ.16-ಬಹು ನಿರೀಕ್ಷಿತ ಜಿಎಸ್‌ಟಿ (ಏಕ ತೆರಿಗೆ)ಪದ್ದತಿ ಜಾರಿಗೆ ಪದೇ-ಪದೇ ಅಡ್ಡಿ ಉಂಟಾಗುತ್ತಿದೆ. ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಪ್ರತಿದಿನ ಒಂದಲ್ಲ ಒಂದು ವಿಷಯದಿಂದ ಗದ್ದಲದಲ್ಲಿ ಮುಳುಗಿ ಸದನ ಕಲಾಪ ಬಲಿಯಾಗುತ್ತಿದೆ. ಕಳೆದ 7 ದಿನಗಳಿಂದ ಸದನದ ಯಾವುದೇ ಪ್ರಮುಖ ವಿಷಯಗಳು ಚರ್ಚೆಗೆ ಬಾರದೆ ವಿಪಕ್ಷಗಳ ಧರಣಿಯಿಂದ ಪದೇ-ಪದೇ ಮುಂದೂಡುವ ಪರಿಸ್ಥಿತಿ ಉಂಟಾಗಿದೆ. ಆರಂಭದಲ್ಲಿ ನ್ಯಾಷನಲ್ ಹೆರಾಲ್ಡ್ ಪ್ರಕರಣ ನಂತರ ಸಿಬಿಐ ದಾಳಿ ಇಂದು ಅರುಣಾಚಲ ಪ್ರದೇಶ ರಾಜ್ಯಪಾಲರ ನಡೆಯ ಬಗ್ಗೆ ಉಭಯ ಸದನಗಳಲ್ಲಿ ಸರ್ಕಾರದ ವಿರುದ್ಧ ಕಾಂಗ್ರೆಸ್, ಎಎಪಿ, ತೃಣಮೂಲ ಕಾಂಗ್ರೆಸ್, ಟಿಎಂಸಿ ಸದಸ್ಯರು ಧರಣಿ ನಡೆಸಿ ಘೋಷಣೆಗಳನ್ನು ಕೂಗಿದ್ದರಿಂದ ಸದನವನ್ನು ಮುಂದೂಡಲಾಯಿತು.

ಲೋಕಸಭೆಯಲ್ಲಿ ಇಂದು ಬೆಳಗ್ಗೆ ಪ್ರಶ್ನೋತ್ತರ ಕಲಾಪ ಆರಂಭವಾಗುತ್ತಿದ್ದಂತೆ ಸ್ಪೀಕರ್ ಮುಂದಿನ ಪೀಠದತ್ತ ಧಾವಿಸಿದ ವಿಪಕ್ಷ ಸದಸ್ಯರು ಘೋಷಣೆಗಳನ್ನು ಕೂಗಲಾರಂಭಿಸಿದರು.  ಸುಷ್ಮಾ ಸ್ವರಾಜ್ ಅವರು ಪಾಕಿಸ್ತಾನದ ಜೊತೆಗಿನ ಶಾಂತಿ ಪ್ರಕ್ರಿಯೆ ಕುರಿತು ಹೇಳಿಕೆ ನೀಡುತ್ತಿದ್ದರೂ ಅದು ಯಾರ ಗಮನಕ್ಕೂ ಬಾರದಂತಹ ಪರಿಸ್ಥಿತಿ ಎದುರಾಯಿತು. ಸದನ ಕೋಲಾಹಲದಲ್ಲಿ ಮುಳುಗಿದಾಗ ಸ್ಪೀಕರ್ ಕಲಾಪವನ್ನು ಮೂಂದೂಡಿದರು.

ಇತ್ತ ರಾಜ್ಯಸಭೆಯಲ್ಲೂ ಕೂಡ ಇದೇ ಪರಿಸ್ಥಿತಿ ಮುಂದುವರೆದು ಅರುಣಾಚಲ ಪ್ರದೇಶದ ರಾಜ್ಯಪಾಲರು ಕೇಂದ್ರ ಸರ್ಕಾರದ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದಾಗಿ ಸದನವನ್ನು ಮೊದಲ ಬಾರಿ 12 ಗಂಟೆವರೆಗೆ ಮುಂದೂಡಲಾಯಿತು ನಂತರ ಪುನಃ ಕಲಾಪ ಆರಂಭಗೊಂಡಾಗ ಮತ್ತೆ ಅದೇ ಗದ್ದಲದ ವಾತಾವರಣದ ಹಿನ್ನೆಲೆಯಲ್ಲಿ ಸದನವನ್ನು 2 ಗಂಟೆಗೆ ಮೂಂದೂಡಲಾಯಿತು.  ದೇಶದಾದ್ಯಂತ ಏಕ ತೆರಿಗೆ (ಜಿಎಸ್‌ಟಿ)ವ್ಯವಸ್ಥೆಗೆ ಕೇಂದ್ರ ಸರ್ಕಾರ ಶತಾಯ-ಗತಾಯ ಪ್ರಯತ್ನ ನಡೆಸುತ್ತಿದ್ದರೂ ಸದನ ಕಲಾಪ ನಡೆಯದೇ ಭಾರೀ ನಿರಾಶೆ ಉಂಟುಮಾಡಿತು.

Write A Comment