ಅಂತರಾಷ್ಟ್ರೀಯ

ಶಾಲೆಯಲ್ಲಿ ಬಾಂಬ್ ಸ್ಪೋಟಿಸುವುದಾಗಿ ಜೋಕ್ ಮಾಡಿ ಪೊಲೀಸರ ಅತಿಥಿಯಾದ ಬಾಲಕ

Pinterest LinkedIn Tumblr

armaan-singh-ginee

ಟೆಕ್ಸಾಸ್: ಮಕ್ಕಳು ತಮ್ಮ ಸಹಪಾಠಿಗಳ ಜೊತೆ ತಮಾಷೆ ಮಾತಾಡುವುದು, ಹರಟೆ ಹೊಡೆಯುವುದು ಸಾಮಾನ್ಯ. ಆದರೆ ಅದೇ ತಮಾಷೆ ಸೀರಿಯಸ್ ಆದರೆ…ಅಮೆರಿಕದ ಟೆಕ್ಸಾಸ್ ನಲ್ಲಿ ಆಗಿದ್ದು ಕೂಡ ಅದೇ.

ಬಾಂಬ್ ಇಟ್ಟು ಕಟ್ಟಡವನ್ನು ಸ್ಪೋಟ ಮಾಡುವುದಾಗಿ 12 ವರ್ಷದ ಭಾರತೀಯ ಸಿಖ್ ಬಾಲಕ ಅರ್ಮಾನ್ ಸಿಂಗ್ ಸಾರೈ ಟೆಕ್ಸಾಸ್ ನಲ್ಲಿರುವ ನಿಕೋಲ್ಸ್ ಜೂನಿಯರ್ ಹೈಸ್ಕೂಲ್ ನಲ್ಲಿ ಓದುತ್ತಿದ್ದಾನೆ. ತನ್ನ ಬ್ಯಾಗಿನಲ್ಲಿ ಬಾಂಬ್ ಇಟ್ಟುಕೊಂಡಿದ್ದೇನೆ. ಶಾಲೆ ಕಟ್ಟಡವನ್ನು ಸ್ಪೋಟಿಸುತ್ತೇನೆ ಎಂದು ಹೇಳಿದ್ದಾನೆ. ಬಾಲಕ ಯಾಕೆ ಹೇಳಿದ್ದಾನೆ, ನಿಜಕ್ಕೂ ಬಾಂಬ್ ಇಡುತ್ತಾನೆಯೇ ಎಂದು ಯೋಚಿಸದೆ, ಅವನನ್ನು ವಿಚಾರಿಸದೆ ಶಾಲೆಯ ಪ್ರಾಂಶುಪಾಲರು ಪೊಲೀಸರನ್ನು ಕರೆದಿದ್ದಾರೆ. ಈ ಬಗ್ಗೆ ಬಾಲಕನ ಸೋದರ ಸಂಬಂಧಿ ಗಿನೀ ಹರ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾಳೆ ಎಂದು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ಘಟನೆ ಹಿನ್ನೆಲೆ: ಅರ್ಮಾನ್ ಸಿಂಗ್ ಸಾರೈ ಎಂದಿನಂತೆ ಮೊನ್ನೆ 11ರಂದು ಕೂಡ ಶಾಲೆಗೆ ಹೋಗಿದ್ದಾನೆ. ತರಗತಿಯ ತನ್ನ ಸಹಪಾಠಿಗಳ ಹತ್ತಿರ ನನ್ನ ಬ್ಯಾಗ್ ನಲ್ಲಿ ಬಾಂಬ್ ಇದೆ. ಶಾಲೆಯ ಕಟ್ಟಡವನ್ನು ಸ್ಪೋಟಿಸುತ್ತೇನೆ ಎಂದು ಹೇಳಿದ್ದಾನೆ.ಸುದ್ದಿ ಪ್ರಾಂಶುಪಾಲರವರೆಗೂ ಹೋಗಿ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕೂಡಲೇ ಪೊಲೀಸರು ಬಂದು ಅರ್ಮಾನ್ ನನ್ನು ಪೊಲೀಸ್ ಠಾಣೆಗೆ ಒಯ್ದು ವಿಚಾರಣೆ ನಡೆಸಿದ್ದಾರೆ.

ಇತ್ತ ಶಾಲೆಗೆ ಹೋದ ಮಗ ಮನೆಗೆ ಬಾರದ್ದರಿಂದ ಚಿಂತಾಕ್ರಾಂತರಾದ ಪೋಷಕರು ಎಲ್ಲ ಕಡೆ ವಿಚಾರಿಸಿದ್ದಾರೆ. ಪೊಲೀಸ್ ಠಾಣೆಗೂ ಫೋನ್ ಮಾಡಿ ಕೇಳಿದ್ದಾರೆ. ಅಲ್ಲಿ ಮಗ ಇರುವುದು ಗೊತ್ತಾಯಿತು. ಪೊಲೀಸರು ಅವನನ್ನು 45 ನಿಮಿಷ ವಿಚಾರಣೆ ನಡೆಸಿ ಬಾಲಾಪರಾಧ ವಿಭಾಗಕ್ಕೆ ಕರೆದೊಯ್ದರು. ಅಲ್ಲಿ ಸತತ ಮೂರು ದಿನಗಳ ಕಾಲ ಇರಿಸಿಕೊಂಡು ಮೊನ್ನೆ 15ರಂದು ಬಿಡುಗಡೆ ಮಾಡಿದ್ದಾರೆ.

ಪೊಲೀಸರು ಹೇಳುವುದೇನು?: ನಮಗೆ ಶಾಲೆಯಿಂದ ಒಂದು ಕರೆ ಬಂತು. ನಾವು ಶಾಲೆಗೆ ಹೋಗಿ ಅರ್ಮಾನ್ ತರಗತಿಯ ಮಕ್ಕಳನ್ನು, ಶಿಕ್ಷಕರನ್ನು ಜಾಗರೂಕರಾಗಿರುವಂತೆ ಎಚ್ಚರಿಕೆ ನೀಡಿದೆವು. ಮಕ್ಕಳನ್ನು ಬೇರೆಡೆಗೆ ಸ್ಥಳಾಂತರಿಸಿದೆವು. ಬಾಲಕನನ್ನು ವಿಚಾರಿಸಿದಾಗ ಆತ ಸುಮ್ಮನೆ ತಮಾಷೆಗೆ ಆ ರೀತಿ ಹೇಳಿದ್ದು ಎಂದು ಗೊತ್ತಾಯಿತು.ಆದರೂ ಭಯೋತ್ಪಾದನೆ ರೀತಿಯ ಹೇಳಿಕೆ ನೀಡಿರುವುದರಿಂದ ಅವನನ್ನು ಪೊಲೀಸ್ ಠಾಣೆಗೆ ಕರೆದೊಯ್ದು 45 ನಿಮಿಷಗಳ ಕಾಲ ವಿಚಾರಣೆ ನಡೆಸಿ ಬಾಲಾಪರಾಧ ವಿಭಾಗಕ್ಕೆ ಕಳುಹಿಸಿದೆವು.ಅಲ್ಲಿ ಯಾಕೆ ಮೂರು ದಿನಗಳ ಕಾಲ ಇಟ್ಟರು ಎಂಬುದು ನಮಗೆ ಗೊತ್ತಿಲ್ಲ. ಆ ವಿಭಾಗ ನಮ್ಮ ಹತೋಟಿಯಲ್ಲಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿ ನುಣುಚಿಕೊಂಡರು.

ಬಾಲಕನ ಹಿರಿಯ ಸಹೋದರ ಅಕ್ಷ್ ಸಿಂಗ್ ಶಾಲೆಯ ಪ್ರಾಂಶುಪಾಲರಿಗೆ ಪತ್ರ ಬರೆದು, ಇತರ ಮಕ್ಕಳು ಕೂಡ ತಮಾಷೆ ಮಾಡುತ್ತಿದ್ದರೂ ನನ್ನ ತಮ್ಮನೊಬ್ಬನನ್ನೇ ಗುರಿಯಾಗಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಶಾಲೆಯ ಹೇಳಿಕೆ: ಸಾಮಾನ್ಯವಾಗಿ ಮಕ್ಕಳು ಇಂತಹ ಬೆದರಿಕೆಗೆ ಸಂಬಂಧಿಸಿದ ಹೇಳಿಕೆ ನೀಡಿದಾಗ ನಾವು ಪೊಲೀಸರಿಗೆ ವಿಷಯ ತಿಳಿಸುತ್ತೇವೆ. ಪೊಲೀಸರು ಅರ್ಮನ್ ಸಿಂಗ್ ಪೋಷಕರನ್ನು ದೂರವಾಣಿಯಲ್ಲಿ ಸಂಪರ್ಕಿಸಲು ಪ್ರಯತ್ನಿಸಿದ್ದರು. ಆದರೆ ಅವರು ಸಿಗಲಿಲ್ಲ. ಬಾಲಕನಲ್ಲಿ ಕೇಳಿದಾಗ ತಂದೆ-ತಾಯಿ ನಂಬರ್ ಗೊತ್ತಿಲ್ಲ ಎಂದನು. ಆರಂಭದಲ್ಲಿ ಕೊಟ್ಟಿದ್ದ ಮನೆ ವಿಳಾಸ, ಫೋನ್ ನಂಬರ್ ಬದಲಾಗಿತ್ತು ಎಂದು ಪ್ರಾಂಶುಪಾಲರು ಹೇಳುತ್ತಾರೆ.

ಸಾರೈ ಹುಟ್ಟಿದ್ದು, ಬೆಳೆದಿದ್ದೆಲ್ಲ ಟೆಕ್ಸಾಸ್ ನಲ್ಲಿ. ನಾಲ್ಕು ತಿಂಗಳ ಹಿಂದೆ ದಲ್ಲಾಸ್ ಗೆ ಕುಟುಂಬ ವರ್ಗಾವಣೆಗೊಂಡಿತ್ತು. ಅವನಿಗೆ ಹೃದಯದ ಸಮಸ್ಯೆ ಕೂಡ ಇದೆ. ಮೂರು ಬಾರಿ ಸರ್ಜರಿಯಾಗಿತ್ತು. ಆದರೆ ತಮಗೆ ಇದೆಲ್ಲ ಗೊತ್ತಿರಲಿಲ್ಲ ಎನ್ನುತ್ತಾರೆ ಪೊಲೀಸರು.

ಅರ್ಮಾನ್ ವಿರುದ್ಧ ಜನಾಂಗೀಯ ದ್ವೇಷದಿಂದ ಈ ರೀತಿ ಹೀನವಾಗಿ ನಡೆಸಿಕೊಳ್ಳಲಾಗಿದೆ ಎಂಬ ಆರೋಪವನ್ನು ಪೊಲೀಸ್ ಅಧಿಕಾರಿ ಕ್ರಿಸ್ಟೋಫರ್ ಕೂಕ್ ನಿರಾಕರಿಸುತ್ತಾರೆ. ಶಾಲೆಗಳಲ್ಲಿ ಇಂತಹ ತಮಾಷೆಯ ಮಾತುಗಳನ್ನಾಡಬಾರದು. ಒಂದು ವೇಳೆ ಹಾಗೆ ಯಾರೇ ಮಾತನಾಡಿದರೂ ಅವರನ್ನು ಜನಾಂಗೀಯತೆಯನ್ನು ಮೀರಿ ನಾವು ಬಂಧಿಸುತ್ತೇವೆ ಎಂದು ಹೇಳುತ್ತಾರೆ.

ಕೆಲ ತಿಂಗಳ ಹಿಂದೆ ಅಹ್ಮದ್ ಮೊಹಮ್ಮದ್ ಎಂಬ ಮುಸಲ್ಮಾನ ಬಾಲಕ ಶಾಲೆಯ ಸಿಬ್ಬಂದಿಗೆ ಗಡಿಯಾರವನ್ನು ಬಾಂಬ್ ಎಂದು ತಮಾಷೆ ಮಾಡಿ ಹೆದರಿಸಿ ಪೊಲೀಸ್ ಠಾಣೆ ಸೇರಿದ ಘಟನೆಯನ್ನು ಇದು ನೆನಪಿಸುತ್ತದೆ.

Write A Comment