ರಾಷ್ಟ್ರೀಯ

ನಿರ್ಭಯಾ ಪ್ರಕರಣ, ಬಾಲಾಪರಾಧಿ ಬಿಡುಗಡೆಗೆ ಸುಪ್ರೀಂಕೋರ್ಟ್ ಅಸ್ತು

Pinterest LinkedIn Tumblr

20-nirbhaya-sc-web1ನವದೆಹಲಿ: 2012ರ ಡಿಸೆಂಬರ್ 16ರಂದು ದೆಹಲಿಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಶಿಕ್ಷಿತ ಬಾಲಾಪರಾಧಿಯ ಬಿಡುಗಡೆ ವಿರುದ್ಧ ದೆಹಲಿ ಮಹಿಳಾ ಆಯೋಗ (ಡಿಸಿಡಬ್ಲ್ಯೂ) ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿಯನ್ನು (ಎಸ್​ಎಲ್​ಪಿ) ಸುಪ್ರೀಂಕೋರ್ಟ್ ಸೋಮವಾರ ವಜಾಗೊಳಿಸಿದೆ.

ಬಾಲಾಪರಾಧಿಯನ್ನು ಭಾನುವಾರ ಬಿಡುಗಡೆ ಮಾಡಿ ಸರ್ಕಾರೇತರ ಸಂಘಟನೆಯೊಂದರ (ಎನ್​ಜಿಒ) ವಶಕ್ಕೆ ಒಪ್ಪಿಸಲಾಗಿದೆ. ನ್ಯಾಯಮೂರ್ತಿ ಎ.ಕೆ. ಗೋಯೆಲ್ ಮತ್ತು ಯು.ಯು. ಲಲಿತ್ ಅವರನ್ನು ಒಳಗೊಂಡ ಸುಪ್ರೀಂಕೋರ್ಟಿನ ರಜಾಕಾಲೀನ ಪೀಠವು ಬಾಲಾಪರಾಧಿಯ ಬಿಡುಗಡೆಗೆ ತಡೆಯಾಜ್ಞೆ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಈದಿನ ವಜಾಗೊಳಿಸಿತು. ಚಲಿಸುವ ವಾಹನದಲ್ಲಿ ನಡೆದಿದ್ದ ಭೀಕರ ಅತ್ಯಾಚಾರ ಪ್ರಕರಣದಲ್ಲಿ ಇತರ ಐವರ ಜೊತೆಗೆ ಷಾಮೀಲಾಗಿದ್ದ 18 ವರ್ಷದ ಒಳಗಿನ ಈ ಬಾಲಾಪರಾಧಿಯನ್ನು ಬಾಲಾಪರಾಧ ನ್ಯಾಯ ಕಾಯ್ದೆಯೆ ಅಡಿಯಲ್ಲಿ ವಿಚಾರಣೆಗೆ ಗುರಿಪಡಿಸಿ ಮೂರು ವರ್ಷಗಳ ಅವಧಿಗೆ ರಿಮಾಂಡ್ ಹೋಂಗೆ ಕಳುಹಿಸಲಾಗಿತ್ತು. ಕಾನೂನಿನ ವಿಧಿಗಳ ಪ್ರಕಾರ ಬಾಲಾಪರಾಧಿಯನ್ನು ಸೆರೆಯಲ್ಲಿ ಇರಿಸಬಹುದಾದ ಗರಿಷ್ಠ ಅವಧಿ ಇದು.

ಆರು ಮಂದಿ ಅಪರಾಧಿಗಳ ಪೈಕಿ ಒಬ್ಬ ವ್ಯಕ್ತಿ ತಿಹಾರ್ ಸೆರೆಮನೆಯಲ್ಲಿಯೇ ಮೃತನಾಗಿದ್ದ. ಉಳಿದ ನಾಲ್ವರು ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸಲಾಗಿದ್ದು, ಹೈಕೋರ್ಟ್ ಅದನ್ನು ಎತ್ತಿ ಹಿಡಿದಿದೆ. ಅವರ ಮೇಲ್ಮನವಿ ಸುಪ್ರೀಂಕೋರ್ಟಿನಲ್ಲಿ ವಿಚಾರಣೆಗೆ ಬಾಕಿ ಉಳಿದಿವೆ. ಈ ಮಧ್ಯೆ ಭಾನುವಾರ ಬಾಲಾಪರಾಧಿಯ ಬಿಡುಗಡೆ ವಿರುದ್ಧ ದೆಹಲಿಯಲ್ಲಿ ಭಾರಿ ಪ್ರತಿಭಟನೆ ವ್ಯಕ್ತವಾಗಿದ್ದು, ಜೀವ ಭಯದಿಂದ ಕಂಗೆಟ್ಟಿರುವ ಬಾಲಾಪರಾಧಿ ತನ್ನನ್ನು ಹೊರಕ್ಕೆ ಬಿಡದಂತೆ ಅಂಗಲಾಚುತ್ತಿದ್ದಾನೆ ಎಂದು ವರದಿಗಳು ತಿಳಿಸಿವೆ.

Write A Comment