ಅಂತರಾಷ್ಟ್ರೀಯ

ಸರಬರಾಜು ಪ್ರಮಾಣದ ನಿರಂತರ ಏರಿಕೆ; 11 ವರ್ಷಗಳಲ್ಲೇ ದಾಖಲೆ ಕುಸಿತ ಕಂಡ ಕಚ್ಚಾ ತೈಲ ಬೆಲೆ

Pinterest LinkedIn Tumblr

Crude Oil

ಸಿಂಗಪೂರ್: ಜಾಗತಿಕ ತೈಲ ಮಾರುಕಟ್ಟೆಗೆ ಹರಿದುಬರುತ್ತಿರುವ ಸರಬರಾಜು ಪ್ರಮಾಣದ ನಿರಂತರ ಏರಿಕೆಯ ಪರಿಣಾಮ ಸೋಮವಾರ ಕಚ್ಛಾ ತೈಲ ಬೆಲೆ 11 ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿದೆ.

ಇರಾನ್, ಅಮರಿಕ ಹಾಗೂ ಲಿಬಿಯಾಗಳಿಂದ ಭಾರೀ ಪ್ರಮಾಣದ ಕಚ್ಛಾ ತೈಲ ಮಾರುಕಟ್ಟೆ ಪ್ರವೇಶಕ್ಕೆ ಸಿದ್ಧವಾಗಿದ್ದು, ಅದಕ್ಕೂ ಮುನ್ನವೇ ತೈಲ ಬೆಲೆ ಜಾಗತಿಕ ಮಾರುಕಟ್ಟೆ ಯಲ್ಲಿ ಭಾರೀ ಕುಸಿತ ದಾಖಲಿಸಿದೆ. ಬ್ರೆಂಟ್ ತೈಲ ಬೆಲೆ ಶೇ.2ರಷ್ಟು ಕುಸಿತ ಕಂಡಿದ್ದು, ಬ್ಯಾರಲ್‍ಗೆ 36.05 ಡಾಲರ್‍ಗೆ ಕುಸಿದಿದೆ. ಇದು 2004ರ ಜುಲೈನಿಂದ ಈವರೆಗಿನ ಅತ್ಯಂತ ಕನಿಷ್ಠ ದರ. ಅಮೆರಿಕ ವೆಸ್ಟ್ ಟೆಕ್ಸಾಸ್ ಇಂಟರ್‍ಮೀಡಿಯೇಟ್ ದರದಲ್ಲೂ ಕುಸಿತ ಉಂಟಾಗಿದ್ದು, ಬ್ಯಾರೆಲ್ ಗೆ 34.40 ಡಾಲರ್ ದಾಖಲಾಗಿದೆ.

ಕಳೆದ ಒಂದು ವರ್ಷದಿಂದ ನಿರಂತರವಾಗಿ ಕುಸಿತಿರುವ ಕಚ್ಛಾ ತೈಲ ಬೆಲೆ ಗ್ರಾಹಕರಿಗೆ ಶುಕ್ರದೆಸೆ ತಂದಿದ್ದರೂ, ತೈಲ ಕಂಪನಿಗಳು ಹಾಗೂ ಮಾರಾಟಗಾರರಿಗೆ ಬಿಕ್ಕಟ್ಟು ತಂದಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ನೈಜೀರಿಯಾ, ವೆನಿಜುವೆಲಾದಂತಹ ತೈಲ ಅವಲಂಬಿತ ದೇಶಗಳು ತೈಲ ಕುಸಿತದ ಹೊಡೆತಕ್ಕೆ ಸಿಕ್ಕು ಅಲ್ಲಿನ ಆರ್ಥಿಕತೆಯೇ ಕುಸಿದುಬಿದ್ದಿದೆ. ಇನ್ನು ಮುಂಚೂಣಿ ತೈಲ ಉತ್ಪಾದಕ ರಾಷ್ಟಗಳ ಒಕ್ಕೂಟದ ಸೌದಿ ಅರೇಬಿಯಾ, ಕುವೈತ್ ಮತ್ತು ಬಹರೇನ್‍ಗಳಲ್ಲೂ ಆರ್ಥಿಕ ಸಂಕಷ್ಟ ಎದುರಾಗಿದ್ದು, ಕಳೆದ ವಾರವಷ್ಟೇ ಬಡ್ಡಿದರ ಏರಿಕೆ ಮೂಲಕ ದೇಶದ ಆರ್ಥಿಕತೆಗೆ ಚೈತನ್ಯ ತುಂಬು ಸರ್ಕಸ್ ಮಾಡಿವೆ. ಇರಾಕ್ ಸೋಮವಾರ, ತನ್ನ ದಿನಾರ್ ಅಪಮೌಲ್ಯಗೊಳಿಸುವ ಮೂಲಕ ತೈಲ ಬೆಲೆ ಕುಸಿತದ ಹೊಡೆತದ ಪರಿಣಾಮ ತಗ್ಗಿಸುವ ಯತ್ನ ಮಾಡಿದೆ ಇನ್ನು ಅಜರ್ ಬೈಜಾನ್ ನಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ.

ತೈಲ ಉತ್ಪಾದನೆ ಸಾಮಥ್ರ್ಯ ಹೆಚ್ಚಳ ಹಾಗೂ ರಫ್ತು ವಿಸ್ತರಣೆಯ ಹಿನ್ನೆಲೆಯಲ್ಲಿ ಮುಂದಿನ ವರ್ಷ ಅಮೆರಿಕ, ಲಿಬಿಯಾ, ಇರಾನ್ ಹಾಗೂ ರಷ್ಯಾ ದೇಶಗಳ ಭಾರೀ ಪ್ರಮಾಣದ ತೈಲ ವಿಶ್ವ ಮಾರುಕಟ್ಟೆ ಪ್ರವೇಶಿಸಲಿದ್ದು, ಭವಿಷ್ಯದಲ್ಲಿ ತೈಲ ಬೆಲೆ ಇನ್ನಷ್ಟು ಕುಸಿತ ಕಾಣಲಿದೆ ಎಂಬುದು ಮಾರುಕಟ್ಟೆ ತಜ್ಞರ ಅಂದಾಜು.

Write A Comment