ಹೈದ್ರಾಬಾದ್, ಡಿ.23-ತನ್ನ ಹಳೆಯ ಸಹೋದ್ಯೋಗಿ ಮಹಿಳೆಯೊಬ್ಬಳನ್ನು ಅಪಹರಿಸಿ ಬಂಧನದಲ್ಲಿಟ್ಟು, ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿ ಅವಳು ಒಪ್ಪದಿದ್ದಾಗ ಅವಳ ಮೇಲೆ ಲೈಂಗಿಕ ದೌರ್ಜನ್ಯ, ಹಿಂಸೆ ನಡೆಸಿದ ಟೆಕ್ಕಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ ತೊಲಿಚೌಕಿ ಪ್ರದೇಶದಲ್ಲಿದ್ದ ಮನೆಯೊಂದರಲ್ಲಿ 27 ವರ್ಷದ ಮಹಿಳೆಯನ್ನು ಈ ಟೆಕ್ಕಿ ಕೂಡಿ ಹಾಕಿದ್ದ. ಇವನ ದೌರ್ಜನ್ಯದಿಂದ ಮಹಿಳೆ ಆಘಾತಕ್ಕೊಳಗಾಗಿದ್ದಳು. ಅಂತೂ ಕೊನೆಗೆ ತನಗೊದಗಿದ ಸ್ಥಿತಿಯ ಬಗ್ಗೆ ತನ್ನ ಸ್ನೇಹಿತೆಗೆ ಎಸ್‌ಎಂಎಸ್ ಕಳುಹಿಸುವಲ್ಲಿ ಆಕೆ ಯಶಸ್ವಿಯಾಗಿದ್ದಳು. ಸ್ನೇಹಿತೆ ಈ ವಿಷಯವನ್ನು ಪೊಲೀಸರಿಗೆ ತಿಳಿಸಿದಳು. ಪೊಲೀಸರು ಮನೆಯ ಮೇಲೆ ದಾಳಿ ನಡೆಸಿದಾಗ ಖದೀಮ ಸಿಕ್ಕಿ ಬಿದ್ದಿದ್ದಾನೆ.
ಅಲಿಘಡ ಮೂಲದ ಸಯ್ಯದ್ ಇಮಾದ್ ಹಸನ್ ಹಿಂದೂ ಯುವತಿಯನ್ನು ಮುಸ್ಲಿಂ ಜಾತಿಗೆ ಮತಾಂತರ ಹೊಂದಿ ನನ್ನ ಮದುವೆಯಾಗು ಎಂದು ಪೀಡಿಸುತ್ತಿದ್ದ. ಅವಳು ಅವನ ಕಾಟ ತಾಳಲಾರದೆ ಕೆಲಸವನ್ನೇ ಬಿಟ್ಟುಬಿಟ್ಟಿದ್ದಳು. ಆದರೆ, ಕೊನೆಗೂ ಅವಳನ್ನು ಪತ್ತೆ ಹಚ್ಚಿದ 30 ವರ್ಷದ ಹಸನ್, ಅಪಹರಿಸಿ ಮನೆಯೊಂದರಲ್ಲಿ ಕೂಡಿ ಹಾಕಿ ಅತ್ಯಾಚಾರ ನಡೆಸಿದ್ದಲ್ಲದೆ ಒಪ್ಪದಿದ್ದರೆ ಕೊಲ್ಲುವ ಬೆದರಿಕೆ ಹಾಕುತ್ತಿದ್ದ. 5 ದಿನ ಹೀಗೇ ನರಕ ಅನುಭವಿಸಿದ ಯುವತಿ ತನ್ನ ಗೆಳತಿಗೆ ಮೆಸೇಜ್ ತಲುಪಿಸಿದ ಹಿನ್ನೆಲೆಯಲ್ಲಿ ರಾಕ್ಷಸನ ಹಿಡಿತದಿಂದ ಪಾರಾಗಿ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಇಲ್ಲಿನ ಜವಾಹರಲಾಲ್ ನೆಹರೂ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಹಸನ್ ಬಿಟೆಕ್ ಪಡೆದಿದ್ದು, ಹಾಲಿ ಟೆಕ್ಕಿಯಾಗಿದ್ದಾನೆ. ತಲೆ, ಮೈಮೇಲೆಲ್ಲಾ ಗಾಯಗೊಂಡಿರುವ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆಕೆಯ ಸಹೋದರ ತಿಳಿಸಿದ್ದಾನೆ.