ರಾಷ್ಟ್ರೀಯ

ಜ.16ರಂದು ‘ಸ್ಟಾರ್ಟ್‌ಅಪ್ ಇಂಡಿಯಾ, ಸ್ಟ್ಯಾಂಡ್ ಅಪ್ ಇಂಡಿಯಾ’ ಗೆ ಚಾಲನೆ

Pinterest LinkedIn Tumblr

modhiನವದೆಹಲಿ, ಡಿ.27-ಉದ್ಯಮಶೀಲತೆಯನ್ನು ತಳಮಟ್ಟದಿಂದ ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರ ಹಮ್ಮಿಕೊಂಡಿರುವ ಸ್ಟಾರ್ಟ್‌ಅಪ್ ಇಂಡಿಯಾ, ಸ್ಟ್ಯಾಂಡ್ ಅಪ್ ಇಂಡಿಯಾದ ಕ್ರಿಯಾ ಯೋಜನೆಗೆ ಜ.16ರಂದು ಚಾಲನೆ ನೀಡಲಾಗುವುದು ಎಂದು ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ, ದೇಶದ ಮೂಲೆ-ಮೂಲೆಗೂ ತಲುಪುವಂತೆ ಈ ಯೋಜನೆಯ ಪ್ರಚಾರ ಮಾಡುವಂತೆ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಮನವಿ ಮಾಡಿದ್ದಾರೆ. ಕಳೆದ ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಈ ಯೋಜನೆ ಪ್ರಕಟಿಸಿದ್ದ ಮೋದಿ, ದೇಶದ ಕುಗ್ರಾಮಗಳ ಕಟ್ಟಕಡೆಯ ಯುವಕರಿಗೂ ಇದು ತಲುಪುವಂತೆ ಈ ಯೋಜನೆಯ ರೂಪುರೇಷೆ ಸಿದ್ದಪಡಿಸಿರುವುದಾಗಿ ಅವರು ಹೇಳಿದ್ದಾರೆ.

ಇದುವರೆಗೂ ಯಾವುದೇ ಸೌಲಭ್ಯಗಳನ್ನು ಪಡೆಯದೆ ಸರ್ಕಾರದ ಯೋಜನೆಗಳಿಂದ ದೂರವೇ ಉಳಿದ ಯುವಜನತೆಗೂ ಈ ಯೋಜನೆಯ ಲಾಭವಾಗಬೇಕು, ಸರ್ಕಾರದ ಎಲ್ಲಾ ಇಲಾಖೆಗಳ ಮೂಲಕ ಯೋಜನೆ ಅನುಷ್ಠಾನಕ್ಕೆ ತರಲಾಗುವುದು ಎಂದು ಅವರು ಹೇಳಿದ್ದಾರೆ.

ಈ ವರ್ಷದ ತಮ್ಮ ಕೊನೆಯ ರೇಡಿಯೋ ಭಾಷಣ ಮನ್-ಕಿ-ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ, ಈ ದೇಶದ ಯುವ ಜನತೆ ಉದ್ಯಮ, ಕೃಷಿ, ಸ್ವ ಉದ್ಯೋಗ ಯಾವುದೇ ಕ್ಷೇತ್ರದಲ್ಲಿ ಹೊಸ ಹೊಸ ಅವಕಾಶಗಳು, ಹೊಸ ವ್ಯವಸ್ಥೆಗಳಿಗೆ ತೆರೆದುಕೊಳ್ಳಬೇಕಾಗುತ್ತದೆ. ಆಗಲೇ ದೇಶದ ಸಮಗ್ರ ಅಭಿವೃದ್ದಿ ಸಾಧ್ಯವಾಗುತ್ತದೆ. ಹೊಸತನವನ್ನು ಅಳವಡಿಸಿಕೊಳ್ಳದೆ, ಹೊಸ ಸಾಧನೆ ಅಸಾಧ್ಯ ಎಂದು ಹೇಳಿದ್ದಾರೆ.

ಸ್ಮಾರ್ಟ್ ಅಪ್ ಇಂಡಿಯಾ, ಸ್ಟ್ಯಾಂಡ್ ಅಪ್ ಇಂಡಿಯಾ ಕಾರ್ಯಕ್ರಮ ಈ ದೇಶದ ಯುವ ಜನತೆಗೆ ಹೊಸ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ. ಜ.16ರಂದು ಈ ಕಾರ್ಯಕ್ರಮದ ಅನಾವರಣ ಈ ದೇಶಾದ್ಯಂತ ಆಗಲಿದೆ. ಇದು ಪೂರ್ಣಪ್ರಮಾಣದಲ್ಲಿ ಅನುಷ್ಠಾನಕ್ಕೆ ಬರಬೇಕಾಗಿದೆ.

ದೇಶದ ಐಐಟಿಗಳು, ಐಐಎಂಗಳು, ಕೇಂದ್ರೀಯ ವಿಶ್ವವಿದ್ಯಾಲಯಗಳು ಹಾಗೂ ಎನ್‌ಐಟಿಗಳಿಗೆ ಈ ಯೋಜನೆ ಸಂಪರ್ಕ ಕಲ್ಪಿಸಲಿದೆ. ಈ ದೇಶದ ಯಾವುದೇ ಮೂಲೆಯಲ್ಲಿರುವ ಒಬ್ಬ ಯುವಕನಿಗೂ ಇದು ನೇರವಾಗಿ ತಲುಪಲಿದೆ ಎಂದು ಪ್ರಧಾನಿ ತಿಳಿಸಿದ್ದಾರೆ. ಸ್ಟಾರ್ಟ್ ಅಪ್ ಕಾರ್ಯಕ್ರಮದಡಿ ಬ್ಯಾಂಕ್‌ಗಳ ಮೂಲಕ ಉದ್ಯಮಶೀಲತೆ ಅಭಿವೃದ್ಧಿಗೆ ಹಣಕಾಸು ನೆರವು ಲಭ್ಯವಾಗಲಿದೆ.  ಈ ದೇಶದಲ್ಲಿ ಉದ್ಯಮಶೀಲತೆಯನ್ನು ಅಭಿವೃದ್ದಿಪಡಿಸುವುದು ಮತ್ತು ಔಧ್ಯಮಿಕ ಕ್ಷೇತ್ರದಲ್ಲಿ ಯುವಜನತೆಗೆ ಉತ್ತೇಜನ ನೀಡುವುದು ಈ ಕಾರ್ಯಕ್ರಮದ ಪ್ರಮುಖ ಉದ್ಧೇಶವಾಗಿದೆ ಎಂದು ಅವರು ಹೇಳಿದ್ದಾರೆ.

Write A Comment