ರಾಷ್ಟ್ರೀಯ

ಸಗಾಯಂ ಆಗುವರೇ ತಮಿಳುನಾಡಿನ ಕೇಜ್ರಿವಾಲ್?

Pinterest LinkedIn Tumblr

sangayamfff

ಚೆನ್ನೈ: ತಮಿಳುನಾಡಿನಲ್ಲೊಬ್ಬ ಅರವಿಂದ ಕೇಜ್ರಿವಾಲ್ ಜನ್ಮತಾಳಲಿದ್ದಾರೆಯೇ? ಇಲ್ಲಿನ ಇತ್ತೀಚೆಗಿನ ಬೆಳವಣಿಗೆಗಳನ್ನು ಗಮನಿಸಿದರೆ ಇಂತಹುದೊಂದು ಪ್ರಶ್ನೆ ಮೂಡದೇ ಇರದು.
ಚೆನ್ನೈನಲ್ಲಿಯು ಸಗಾಯಂ ಎಂಬ ಐಎಎಸ್ ಅಧಿಕಾರಿಯ ಜನಪ್ರಿಯತೆ ದಿನೇ ದಿನೆ ಹೆಚ್ಚುತ್ತಿದ್ದು, ಯುವಜನತೆ ಅವರತ್ತ ಆಕರ್ಷಿತರಾಗುತ್ತಿದ್ದಾರೆ.

ಇದಕ್ಕೆ ಶುಕ್ರವಾರ ತಿರುಚಿ ಮೂಲದ ಇಳಕ್ಕು ಎಂಬ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮವೇ ಸಾಕ್ಷಿ. ರ್ಯಾಲಿಯಲ್ಲಿ ಪಾಲ್ಗೊಳ್ಳುವಂತೆ ಸುಮಾರು 1 ಲಕ್ಷ ಮೊಬೈಲ್ ಸಂದೇಶಗಳನ್ನು ಕಳುಹಿಸಲಾಗಿತ್ತು. ಆದರೆ, ಪ್ರವಾಹದಿಂದಾಗಿ ಇನ್ನೂ ನೆಟ್ ವರ್ಕ್ ಸಮಸ್ಯೆ ಬಗೆಹರಿಯದ ಕಾರಣ, ಸಂದೇಶಗಳು ಹೋಗಿರಲಿಲ್ಲ. ಇದರಿಂದ ಆಯೋಜಕರು ನಿರಾಶರಾಗಿದ್ದರು.

ಆದರೆ, ಅಚ್ಚರಿಯೆಂಬಂತೆ, ರ್ಯಾಲಿಯತ್ತ ಜನಸಾಗರವೇ ಹರಿದುಬರತೊಡಗಿತು. ಎಗ್ರೋರ್ ನ ರಾಜರತ್ನಂ ಸ್ಟೇಡಿಯಂನಲ್ಲಿ ಸಾವಿರಾರು ಮಂದಿ ಸೇರಿದರು. ಮಧುರೈ ಸೇರಿದಂತೆ ತಮಿಳುನಾಡಿನ ವಿವಿಧೆಡೆಗಳಿಂದ ಯುವ ವಿದ್ಯಾವಂತರು ಧಾವಿಸಿ ಬಂದಿದ್ದರು.

ಸಗಾಯಂ ಸರ್ ಅವರೇ ನಮ್ಮ ಮುಂದಿನ ಮುಖ್ಯಮಂತ್ರಿಯಾಗಬೇಕು ಎಂಬುದು ಎಲ್ಲರ ಆಸೆ ಎಂದಿದ್ದಾರೆ ಇಳಕ್ಕು ಪ್ರಧಾನ ಕಾರ್ಯದರ್ಶಿ ಸೈಯದ್ ಒಮರ್ ಮುಖ್ತಾರ್.

ಸಗಾಯಂಗೇ ಗೊತ್ತಿಲ್ಲ: ದೆಹಲಿಯಲ್ಲಿ ಇಂಡಿಯಾ ಅಗೈನ್ಸ್ಟ್ ಕಪಶ್ನನ್ ಚಳವಳಿಯು ಹೇಗೆ ಕೇಜ್ರಿವಾಲ್ ರನ್ನು ಹುಟ್ಟುಹಾಕಿತೋ, ಅದೇ ರೀತಿ ತಮಿಳುನಾಡಿನಲ್ಲಿ ಸಗಾಯಂರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿಸಲು ಇಳಕ್ಕು ಮುಂದಾಗಿದೆ.

ಅದಕ್ಕಾಗಿ ಮಿಸ್ಡ್ ಕಾಲ್ ಅಭಿಯಾನವನ್ನೂ ಆರಂಭಿಸಿದೆ. ಸಗಾಯಂ ಅವರ ಅನುಮತಿ ಪಡೆಯದೇ ಸುದ್ದಿಗೋಷ್ಠಿಯನ್ನೂ ನಡೆಸಿದೆ. ಇತ್ತೀಚೆಗೆ, ಸಗಾಯಂರನ್ನು ಸಿಎಂ ಅಭ್ಯರ್ಥಿಯನ್ನಾಗಿಸಲು ಬೆಂಬಲಿಸಿ ಮಿಸ್ಡ್ ಕಾಲ್ ಕೊಡುವಂತೆ ಕೇಳಿಕೊಳ್ಳಲಾಗಿತ್ತು.

ಇದಕ್ಕೆ ಆರಂಭದಲ್ಲಿ ಸುಮಾರು 10 ಸಾವಿರ ಮಿಸ್ಡ್ ಕಾಲ್ ಬಂದಿದ್ದವು. ಆದರೆ, ಚೆನ್ನೈ ಪ್ರವಾಹದ ಬಳಿಕ ಲಕ್ಷಾಂತರ ಮಿಸ್ಡ್ ಕಾಲ್ ಬಂದಿದ್ದು, ಇವುಗಳನ್ನು ತೋರಿಸಿ ಸಿಎಂ ಅಬ್ಯರ್ಥಿಯಾಗುವಂತೆ ಸಗಾಯಂರ ಮನವೊಲಿಸುವುದು ಸಂಘಟನೆಯ ಉದ್ದೇಶ.

ಅಚ್ಚರಿಯೆಂದರೆ, ಇಂತಹದೊಂದು ಬೆಳವಣಿಗೆ ನಡೆಯುತ್ತಿರುವುದು ಸ್ವತಃ ಸಗಾಯಂ ಅವರಿಗೇ ಗೊತ್ತಿಲ್ಲ. ಈ ಬಗ್ಗೆ ಅವರನ್ನು ಪ್ರಶ್ನಿಸಿದಾಗ, ನನ್ನನ್ನು ಯಾರೂ ಭೇಟಿಯಾಗಿಲ್ಲ. ಈ ಬಗ್ಗೆ ಚರ್ಚಿಸಲು ನಾನು ಇಷ್ಟಪಡುವುದಿಲ್ಲ ಎಂದಿದ್ದಾರೆ ಎಂದು ದಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ಯಾರಿವರು ಸಗಾಯಂ?: ಮಧುರೈ ಜಿಲ್ಲಾಧಿಕಾರಿಯಾಗಿದ್ದಾಗ ಅವರು ಮಾಡಿದ ಕಾರ್ಯಗಳೇ ಸಗಾಯಂರನ್ನು ಜನಪ್ರಿಯತೆಯ ತುತ್ತತುದಿಗೇರಿಸಿತು. ಇಲ್ಲಿ ರು.16 ಸಾವಿರ ಕೋಟಿ ಗ್ರಾನೈಟ್ ಗಣಿ ಹಗರಣವನ್ನು ಹೊರತಂದಿದ್ದೇ ಸಗಾಯಂ.

ಇದಾದ ಬಳಿಕ ಇವರನ್ನೇ ಹಗರಣದ ತನಿಖಾ ಆಯುಕ್ತರನ್ನಾಗಿ ಹೈಕೋರ್ಟ್ ನೇಮಕ ಮಾಡಿತ್ತು. ಈ ನಡುವೆ, ತಮಿಳುನಾಡು ಚುನಾವಣೆಗೆ ಇನ್ನಿರುವುದು ಕೇವಲ 120 ದಿನಗಳು. ಪ್ರವಾಹ, ಮಳೆಯಿಂದ ತತ್ತರಿಸಿರುವಂತಹ ಈ ಪರಿಸ್ಥಿತಿಯಲ್ಲಿ ಹೊಸ ನಾಯಕನೊಬ್ಬ ಕಣಕ್ಕಿಳಿದು, ಗೆಲ್ಲುವುದು ಸುಲಭದ ಮಾತಲ್ಲ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

Write A Comment