ರಾಷ್ಟ್ರೀಯ

ಪತ್ರಕರ್ತರ ಪಾಲಿನ ಅಪಾಯಕಾರಿ ರಾಷ್ಟ್ರಗಳಲ್ಲಿ ಭಾರತಕ್ಕೆ 3ನೆ ಸ್ಥಾನ; 2015ರಲ್ಲಿ ವಿಶ್ವಾದ್ಯಂತ 110 ಪತ್ರಕರ್ತರ ಹತ್ಯೆ

Pinterest LinkedIn Tumblr

Jounalistಹೊಸದಿಲ್ಲಿ, ಡಿ.29: 2015ರಲ್ಲಿ ವಿಶ್ವಾದ್ಯಂತ ಬರೋಬ್ಬರಿ 110 ಪತ್ರಕರ್ತರು ಕೊಲ್ಲಲ್ಪಟ್ಟಿದ್ದಾರೆ. ಇದೇ ವೇಳೆ ವರದಿ ವರ್ಷದಲ್ಲಿ ಒಂಭತ್ತು ಪತ್ರಕರ್ತರ ಹತ್ಯೆಯೊಂದಿಗೆ ಭಾರತವು ಪತ್ರಕರ್ತರ ಪಾಲಿಗೆ ಅತ್ಯಂತ ಅಪಾಯಕಾರಿಯಾದ ಮೂರು ರಾಷ್ಟ್ರಗಳ ಸಾಲಿನಲ್ಲಿ ಸೇರಿದೆ.

ಭಾರತವು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳನ್ನೂ ಮೀರಿಸಿ ಏಷ್ಯಾದಲ್ಲಿ ಪತ್ರಕರ್ತರ ಪಾಲಿಗೆ ಅತ್ಯಂತ ಅಪಾಯಕಾರಿ ರಾಷ್ಟ್ರವಾಗಿರುವುದನ್ನು ಈ ಸಾವುಗಳು ಖಚಿತಪಡಿಸಿವೆ ಎಂದು ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್ (ಆರ್‌ಎಸ್‌ಎಫ್) ತನ್ನ ವಾರ್ಷಿಕ ವರದಿಯಲ್ಲಿ ಹೇಳಿದೆ. ಭಾರತಕ್ಕಿಂತ ಹೆಚ್ಚು ಪತ್ರ ಕರ್ತರು ಕೊಲೆಯಾಗಿರುವುದು ಯುದ್ಧಗ್ರಸ್ತ ಇರಾಕ್ ಮತ್ತು ಸಿರಿಯಾಗಳಲ್ಲಿ ಮಾತ್ರ. 2015ರಲ್ಲಿ ಭಾರತದಲ್ಲಿ ಹತ್ಯೆಯಾದ ಒಂಬತ್ತು ಪತ್ರಕರ್ತರ ಪೈಕಿ ನಾಲ್ವರ ಹತ್ಯೆಗೆ ಕಾರಣಗಳು ಇನ್ನೂ ನಿಗೂಢವಾಗಿಯೇ ಇವೆ ಎಂದು ಆರ್‌ಎಸ್‌ಎಫ್ ಹೇಳಿದೆ.

ಭಾರತದ ಜೊತೆಗೆ ಇರಾಕ್(11), ಸಿರಿಯಾ(10), ಫ್ರಾನ್ಸ್(8), ಯೆಮೆನ್(8), ಮೆಕ್ಸಿಕೋ(8),ದಕ್ಷಿಣ ಸುಡಾನ್(7),ಫಿಲಿಪ್ಪೀನ್ಸ್(7) ಮತ್ತು ಹೊಂಡುರಾಸ್(7) ಇವು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಪತ್ರಕರ್ತರು ಕೊಲ್ಲಲ್ಪಟ್ಟ ಇತರ ರಾಷ್ಟ್ರಗಳಾಗಿವೆ.

2015ರಲ್ಲಿ ಹತ್ಯೆಯಾದ 110 ಪತ್ರಕರ್ತರ ಪೈಕಿ ಕನಿಷ್ಠ 67 ಜನರು ವರದಿಗಾರಿಕೆ ಸಂದರ್ಭಗಳಲ್ಲಿ ಅಥವಾ ತಮ್ಮ ಕಾರ್ಯದಿಂದಾಗಿ ಬಲಿಯಾಗಿದ್ದಾರೆ. ಇತರ 43 ಪತ್ರಕರ್ತರ ಹತ್ಯೆಗಳಿಗೆ ಕಾರಣಗಳು ಅಸ್ಪಷ್ಟವಾಗಿವೆ. ಈ 67 ಸಾವುಗಳೊಂದಿಗೆ 2005ರಿಂದೀಚಿಗೆ ತಮ್ಮ ಕೆಲಸಕ್ಕೆ ಸಂಬಂಧಿಸಿದಂತೆ ಕೊಲ್ಲಲ್ಪಟ್ಟ ಪತ್ರಕರ್ತರ ಒಟ್ಟು ಸಂಖ್ಯೆ 787ಕ್ಕೇರಿದೆ ಎಂದು ಆರ್‌ಎಸ್‌ಎಫ್ ತನ್ನ ವರದಿಯಲ್ಲಿ ಹೇಳಿದೆ.

ಸಂಘಟಿತ ಅಪರಾಧಗಳು ಮತ್ತು ರಾಜಕಾರಣಿಗಳೊಂದಿಗೆ ಅವುಗಳ ನಂಟುಗಳ ಬೆನ್ನು ಹತ್ತುವ ಎದೆಗಾರಿಕೆ ತೋರಿಸಿದ ಭಾರತೀಯ ಪತ್ರಕರ್ತರು 2015ರ ಆರಂಭದಿಂದ ಹೆಚ್ಚುತ್ತಿರುವ ಹಿಂಸೆಗೆ, ವಿಶೇಷವಾಗಿ ಅಪರಾಧ ಮೂಲಗಳ ಹಿಂಸೆಗೆ ಗುರಿಯಾಗಿದ್ದಾರೆ ಎಂದು ಅದು ಬೆಟ್ಟು ಮಾಡಿದೆ.

ಸಂದೀಪ ಕೊಠಾರಿ ಹತ್ಯೆಯ ಬಳಿಕ ಪತ್ರಕರ್ತರ ರಕ್ಷಣೆಗೆ ರಾಷ್ಟ್ರೀಯ ವ್ಯವಸ್ಥೆಯೊಂದನ್ನು ರೂಪಿಸುವಂತೆ ಆರ್‌ಎಸ್‌ಎಫ್ ಸರಕಾರವನ್ನು ಆಗ್ರಹಿಸಿತ್ತು. ಪತ್ರಕರ್ತರಿಗೆ ಎದುರಾಗುವ ಬೆದರಿಕೆಗಳ ತೀವ್ರತೆಗನುಗುಣವಾಗಿ ಪ್ರತಿಕ್ರಿಯಿಸಬೇಕಾದ್ದು ಈಗಿನ ಅಗತ್ಯವಾಗಿದೆ ಎಂದು ಅದು ತಿಳಿಸಿದೆ. ಜಬಲಪುರದ ಹಲವಾರು ಹಿಂದಿ ದೈನಿಕಗಳಿಗೆ ವರದಿಗಾರರಾಗಿದ್ದ ಮಧ್ಯಪ್ರದೇಶದ ಬಾಲಘಾಟ್ ಜಿಲ್ಲೆಯ ನಿವಾಸಿ ಕೊಠಾರಿ(40) ಮರಳು ಮಾಫಿಯಾದ ಹಿಂದೆ ಬಿದ್ದಿದ್ದು, ಜೂ.21ರಂದು ನಾಗಪುರದ ತೋಟದ ಮನೆಯಲ್ಲಿ ಅವರ ಸುಟ್ಟು ಕರಕಲಾದ ಶವ ಪತ್ತೆಯಾಗಿತ್ತು. 27 ನಾಗರಿಕ ಪತ್ರಕರ್ತರು ಮತ್ತು ಏಳು ಮಾಧ್ಯಮ ಸಿಬ್ಬಂದಿಗಳೂ 2015ರಲ್ಲಿ ಕೊಲ್ಲಲ್ಪಟ್ಟಿದ್ದಾರೆ.

ಚಾರ್ಲಿ ಹೆಬ್ಡೊ ದಾಳಿ ಫ್ರಾನ್ಸ್‌ನ್ನು 2015ರಲ್ಲಿ ಪತ್ರಕರ್ತರಿಗೆ ನಾಲ್ಕನೆಯ ಅತ್ಯಂತ ಅಪಾಯಕಾರಿ ರಾಷ್ಟ್ರವನ್ನಾಗಿಸಿದೆ. ಹಿಂದೆಂದೂ ಪಾಶ್ಚಾತ್ಯ ಜಗತ್ತು ಮಾಧ್ಯಮ ರಂಗದಲ್ಲಿ ಇಂತಹ ನರಮೇಧವನ್ನು ಕಂಡಿರಲಿಲ್ಲ ಎಂದು ಹೇಳಿರುವ ಆರ್‌ಎಸ್‌ಎಫ್ ಪತ್ರಕರ್ತರ ರಕ್ಷಣೆಯಲ್ಲಿ ವಿಶ್ವಾದ್ಯಂತದ ವೈಫಲ್ಯವನ್ನು ಖಂಡಿಸಿದೆಯಲ್ಲದೆ, ತುರ್ತು ಪರಿಸ್ಥಿತಿಯೋಪಾದಿಯ ಕ್ರಮಕ್ಕಾಗಿ ಕರೆ ನೀಡಿದೆ.

Write A Comment