ರಾಷ್ಟ್ರೀಯ

ಮೋದಿ ಸಂಪುಟ ಪುನರ್ ರಚನೆ?: ಸೂಕ್ತ ಅಭ್ಯರ್ಥಿಗಳ ಕೊರತೆ

Pinterest LinkedIn Tumblr

narendra-modiನವದೆಹಲಿ: ಕಳೆದ ನವೆಂಬರ್ ನಲ್ಲಿ ಬಿಹಾರ ರಾಜ್ಯ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ನಂತರ ಸಂಪುಟವನ್ನು ಕೂಲಂಕಷ ಪರೀಕ್ಷೆ ನಡೆಸಿ ಸಂಕಷ್ಟದಿಂದ ಪಾರು ಮಾಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಯಸಿದ್ದಾರೆ. ಅದಕ್ಕಾಗಿ ತಮ್ಮ ಸಂಪುಟದಲ್ಲಿ ಕಡಿಮೆ ಸಾಧನೆ ಮಾಡಿದ ಸಚಿವರನ್ನು ತೆಗೆದು ಹೊಸಬರನ್ನು ಸೇರಿಸಿಕೊಳ್ಳುವ ಇಚ್ಛೆ ಅವರದ್ದು. ಆದರೆ ಅವರಿಗೆ ಸೂಕ್ತ ಬದಲಿ ಅಭ್ಯರ್ಥಿಗಳು ಸಿಗುತ್ತಿಲ್ಲ.

ಮೋದಿ ಅವರ ನೇತೃತ್ವದ ಸಚಿವ ಸಂಪುಟ ಬದಲಾವಣೆಯಾಗುತ್ತಿದೆ ಎಂಬ ಊಹಾಪೋಹಗಳು ಕಳೆದ ಹಲವು ದಿನಗಳಿಂದ ಕೇಳಿಬರುತ್ತಿದ್ದು, ಮುಂದಿನ ವರ್ಷ ಆರಂಭಕ್ಕೆ ಮೋದಿ ಸಂಪುಟದಲ್ಲಿ ಹಲವು ಬದಲಾವಣೆಗಳು ಆಗುವ ಸಾಧ್ಯತೆಗಳಿವೆ. ಇದಕ್ಕಾಗಿ ಪ್ರತಿಭಾವಂತ ಸಂಸದರ ಹುಡುಕಾಟ ನಡೆಯುತ್ತಿದೆ ಎಂದು ಪ್ರಧಾನಿಯವರ ನಿಕಟವರ್ತಿಯೊಬ್ಬರು ತಿಳಿಸಿದ್ದಾರೆ.

ಬಿಜೆಪಿ ಏಳಿಗೆ ದೃಷ್ಟಿಯಿಂದ ಪಕ್ಷವನ್ನು ಪುನರ್ರಚಿಸುವ ಅಗತ್ಯವಿದೆ. ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಈಗಾಗಲೇ ಒಂದೂವರೆ ವರ್ಷ ಕಳೆದಿದೆ. ಆರ್ಥಿಕ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಮೊದಲಾದ ಭರವಸೆಗಳೊಂದಿಗೆ ಅಧಿಕಾರಕ್ಕೆ ಬಂದ ಎನ್ ಡಿಎ ಯಾಕೋ ಇತ್ತೀಚೆಗೆ ಸ್ವಲ್ಪ ಜನಪ್ರಿಯತೆ ಕಳೆದುಕೊಂಡಂತೆ ಕಾಣುತ್ತಿದೆ. ಹೂಡಿಕೆ ಹೆಚ್ಚಳದ ಸುಧಾರಣಾ ನೀತಿಗಳು ಅಷ್ಟೊಂದು ಪ್ರಭಾವ ಬೀರಿದಂತೆ ಕಾಣುತ್ತಿಲ್ಲ. ಗ್ರಾಮೀಣ ಪ್ರದೇಶಗಳು ಬರಗಾಲ ಅನುಭವಿಸುತ್ತಿವೆ. ಇಂತಹ ಪರಿಸ್ಥಿತಿ ಮತ್ತು ಸವಾಲುಗಳನ್ನು ಎದುರಿಸಿ ಅತ್ಯಂತ ಶೀಘ್ರವಾಗಿ ಸುಧಾರಣೆಗಳನ್ನು ಮತ್ತು ನೀತಿಗಳನ್ನು ತರುವ ಸರಿಯಾದ ಸಚಿವ ಅಭ್ಯರ್ಥಿಗಳನ್ನು ಗುರುತಿಸುವುದು ಕೂಡ ಸವಾಲಿನ ಪ್ರಶ್ನೆಯಾಗಿದೆ.

ಪ್ರಸ್ತುತ ಹಣಕಾಸು ಸಚಿವರಾಗಿರುವ ಅರುಣ್ ಜೇಟ್ಲಿಯವರಿಗೆ ರಕ್ಷಣಾ ಇಲಾಖೆಯ ಖಾತೆ ನೀಡುವ ಯೋಜನೆ ಪ್ರಧಾನಿಯವರದ್ದು.ಆದರೆ ಹಣಕಾಸು ಖಾತೆಯನ್ನು ವಹಿಸಿಕೊಳ್ಳುವ ಸರಿಯಾದ ಅಭ್ಯರ್ಥಿಗಳು ಸಿಗುತ್ತಿಲ್ಲ. ಆದರೆ ಈ ಬಗ್ಗೆ ಮೋದಿಯವರ ವಕ್ತಾರರು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ಅರುಣ್ ಜೇಟ್ಲಿಯವರನ್ನು ಕಚೇರಿಯನ್ನು ಸಂಪರ್ಕಿಸಿದರೆ ಸಂಪುಟ ಪುನರ್ರಚನೆ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ. ಪ್ರಧಾನಿಯವರು ಇಂತಹ ವಿಷಯಗಳನ್ನು ಕೊನೆ ಕ್ಷಣದವರೆಗೂ ರಹಸ್ಯವಾಗಿ ಇಟ್ಟುಕೊಳ್ಳುತ್ತಾರೆ. ಸಂಪುಟ ಪುನಾರ್ರಚನೆ ಅಥವಾ ವಿಸ್ತರಣೆಯ ಅಂತಿಮ ನಿರ್ಧಾರ ಪ್ರಧಾನಿಯವರಿಗೆ ಬಿಟ್ಟಿದ್ದು. ಇದುವರೆಗೆ ಅವರು ನಿರ್ಧಾರ ತೆಗೆದುಕೊಂಡಂತಿಲ್ಲ ಎಂದು ಪ್ರಧಾನಿಯವರ ಒಬ್ಬ ಆಪ್ತ ಮಾಧ್ಯಮಗಳಿಗೆ ತಿಳಿಸಿದರೆ ಮತ್ತೊಬ್ಬರು ಇದೆಲ್ಲಾ ವದಂತಿಯಷ್ಟೆ. ಈ ಸುದ್ದಿಗಳಿಗೆ ಯಾವುದೇ ಆಧಾರಗಳಿಲ್ಲ ಎಂದು ತಿಳಿಸಿದ್ದಾರೆ.

ಪ್ರತಿಭಾವಂತರ ಕೊರತೆ: ಕಾಂಗ್ರೆಸ್ ಪಕ್ಷಕ್ಕೆ ಹೋಲಿಸಿದರೆ ನಮ್ಮಲ್ಲಿ ಪ್ರತಿಭಾವಂತರು ಕಡಿಮೆ. ಆದರೆ ಸಮಯಕ್ಕೆ ಸರಿಯಾಗಿ ನಮ್ಮ ಅಡಿಪಾಯವನ್ನು ಭದ್ರಪಡಿಸಿಕೊಳ್ಳಬೇಕಾಗಿದೆ ಎಂದು ಹೇಳುತ್ತಾರೆ ಬಿಜೆಪಿ ಉಪಾಧ್ಯಕ್ಷ ವಿನಯ್ ಸಹಸ್ರಬುದ್ದೆ. ಸರ್ಕಾರದ ಆಡಳಿತವನ್ನು ಸರಿಯಾದ ದಿಕ್ಕಿನಲ್ಲಿ ನಡೆಸಿಕೊಂಡು ಹೇಗೆ ಹೋಗಬೇಕೆಂಬ ಪ್ರಕ್ರಿಯೆಯನ್ನು ಮೋದಿಯವರು ಆರಂಭಿಸಿದ್ದಾರೆ. ಇಲ್ಲಿ ಅದಕ್ಷರಿಗೆ ಗಟ್ಟಿ ಸಂದೇಶ ಕಳುಹಿಸುತ್ತಾರೆ ಎಂದು ಸಹಸ್ರಬುದ್ದೆ ಹೇಳುತ್ತಾರೆ.

ಕೇಂದ್ರ ಸರ್ಕಾರದ ಹಣೆಬರಹ 2019ರ ಸಾಮಾನ್ಯ ಚುನಾವಣೆಯನ್ನು ಮಾತ್ರವಲ್ಲದೆ, ಅದಕ್ಕಿಂತ ಮೊದಲು ಬರುವ ರಾಜ್ಯ ಚುನಾವಣೆಗಳನ್ನು ಕೂಡ ಅವಲಂಬಿಸಿದೆ. ಈ ಎಲ್ಲಾ ವಿಷಯಗಳ ಕುರಿತು ಚರ್ಚಿಸಲು ಆರ್ ಎಸ್ ಎಸ್ ಮತ್ತು ಬಿಜೆಪಿ ಉನ್ನತ ಮುಖಂಡರು ಜನವರಿ ತಿಂಗಳ ಎರಡನೇ ವಾರದಲ್ಲಿ ಒಟ್ಟು ಸೇರಿ ಚರ್ಚೆ ನಡೆಸುವ ನಿರೀಕ್ಷೆಯಿದೆ.

Write A Comment