ರಾಷ್ಟ್ರೀಯ

ಗಡಿಯಲ್ಲಿ ಮತ್ತೆ ಗುಂಡಿನ ಮೊರೆತ : ಎಲ್‌ಇಟಿ ಉಗ್ರರಿಬ್ಬರ ಹತ್ಯೆ

Pinterest LinkedIn Tumblr

gadiಶ್ರೀನಗರ, ಡಿ.31-ಜಮ್ಮು-ಕಾಶ್ಮೀರ ದಕ್ಷಿಣ ಪ್ರಾಂತ್ಯದ ಪುಲ್ವಾಮಾ ಜಿಲ್ಲೆಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿ ಮತ್ತು ನುಸುಳುಕೋರರ ನಡುವೆ ಇಂದು ಮುಂಜಾನೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರನ್ನು ಸೇನಾ ಯೋಧರು ಹೊಡೆದುರುಳಿಸಿದ್ದಾರೆ.

ಪುಲ್ವಾಮಾ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಕಳೆದ ಮಧ್ಯರಾತ್ರಿ ಲಷ್ಕರ್-ಎ-ತಯ್ಬಾ ಉಗ್ರರು ಒಳನುಸುಳುವ ಪ್ರಯತ್ನದಲ್ಲಿದ್ದಾರೆ ಎಂಬ ಸುಳಿವು ದೊರೆತ ಹಿನ್ನೆಲೆಯಲ್ಲಿ ಬಿಎಸ್‌ಎಫ್ ಯೋಧರು ಕಾರ್ಯಾಚರಣೆಗಿಳಿದರು. ಬಿಎಸ್‌ಎಫ್ ಪಡೆ ಹಾಗೂ ಜಮ್ಮು-ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಲು ಮುಂದಾದಾಗ ಉಗ್ರರು ಗುಂಡು ಹಾರಿಸಲಾರಂಭಿಸಿದರು. ಬೆಳಗಿನ ಜಾವದವರೆಗೂ ಈ ಚಕಮಕಿ ನಿರಂತರವಾಗಿ ನಡೆಯಿತು.
ಕೊನೆಗೆ, ಒಳನುಸುಳಿದ ಇಬ್ಬರೂ ಎಲ್‌ಇಟಿ ಉಗ್ರರೂ ಹತರಾದರು. ಇವರು ನಿಷೇಧಿತ ಹಿಜ್ಬುಲ್ ಸಂಘಟನೆಯ ಸೂಚನೆಯಂತೆ ಭಯೋತ್ಪಾದಕ ಕೃತ್ಯ ನಡೆಸಲು ಸಿದ್ಧತೆ ನಡೆಸಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿರುವುದಾಗಿ ಸೇನಾ ವಕ್ತಾರರು ತಿಳಿಸಿದ್ದಾರೆ.
ಗುಂಡಿಗೆ ಬಲಿಯಾದ ಇಬ್ಬರಲ್ಲಿ ಒಬ್ಬನನ್ನು ಮಂಜೂರ್ ಭಟ್ ಎಂದು ಗುರುತಿಸಲಾಗಿದ್ದು, ಮತ್ತೊಬ್ಬ ವಿದೇಶಿ ಮೂಲದ ಉಗ್ರನ ಗುರುತು ಇನ್ನೂ ಪತ್ತೆಯಾಗಿಲ್ಲ. ಮೃತ ಉಗ್ರರ ಬಳಿಯಿದ್ದ ಎರಡು ಎಕೆ-47 ರೈಫಲ್‌ಗಳು, 4 ಮಾಗಜಿನ್‌ಗಳು ಮತ್ತಿತರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ-ನವಾಜ್ ಷರೀಫ್ ಅವರ ಶಾಂತಿ ಪ್ರಕ್ರಿಯೆ ಮಾತುಕತೆಗಳ ಕಾರಣದಿಂದಾಗಿ ಕಳೆದ ಕೆಲ ದಿನಗಳಿಂದ ತಣ್ಣಗಾಗಿದ್ದ ಜಮ್ಮು-ಕಾಶ್ಮೀರ ಗಡಿಯಲ್ಲಿ ಇಂದು ಮತ್ತೆ ಗುಂಡಿನ ಮೊರೆತ ಕೇಳಿಬಂದಿದೆ.

Write A Comment