ರಾಷ್ಟ್ರೀಯ

ಮೋದಿ ವಿದೇಶಿ ಯಾತ್ರೆ ವಿವಾದ…

Pinterest LinkedIn Tumblr

narendra-modi

ನವದೆಹಲಿ: ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ 19 ತಿಂಗಳಾಗಿದ್ದು, ಈ ಅವಧಿಯಲ್ಲಿ ಅವರು ಜಗತ್ತಿನ 33 ದೇಶಗಳಿಗೆ ಭೇಟಿ ನೀಡಿದ್ದಾರೆ. ಆದಾಗ್ಯೂ, 2016ನೇ ವರ್ಷದಲ್ಲಿ ವಿದೇಶಿ ಪ್ರವಾಸ ಕಡಿತಗೊಳಿಸಿ, ಚುನಾವಣಾ ಸಂದರ್ಭದಲ್ಲಿ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸುವ ಪ್ರಯತ್ನಕ್ಕೆ ಮುಂದಾಗಲಿದ್ದಾರೆ.

ಈ ವರ್ಷದಲ್ಲಿ ಪ್ರಮುಖ ಅಂತಾರಾಷ್ಟ್ರೀಯ ಶೃಂಗಸಭೆಗಳಲ್ಲಿ ಮಾತ್ರ ಪ್ರಧಾನಿಯವರು ಭಾಗವಹಿಸಿ, ದೇಶದ ವ್ಯಾಪಾರವೃದ್ಧಿಗೆ ಬಲ ನೀಡಲಿದ್ದಾರೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ. ಕಳೆದ ವರ್ಷದಲ್ಲಿ ಪ್ರಧಾನಿಯವರು ಹಲವು ರಾಷ್ಟ್ರಗಳಿಗೆ ಭೇಟಿ ನೀಡಿದ್ದನ್ನು ವಿಪಕ್ಷಗಳು ತೀವ್ರ ತರಾಟೆಗೆ ತೆಗೆದುಕೊಂಡು, ಇದರಿಂದ ಭಾರತಕ್ಕೆ ಏನು ಲಾಭವಾಗಿದೆ ಎಂದು ಪ್ರಶ್ನಿಸಿದ್ದವು. ಮಾತ್ರವಲ್ಲ ಪ್ರಧಾನಿಯವರನ್ನು ಕಾಂಗ್ರೆಸ್ “ಎನ್‌ಆರ್‌ಐ ಪಿಎಂ” ಎಂದು ಲೇವಡಿ ಮಾಡಿತ್ತು.

ಪ್ರಧಾನಿಯವರ ವಿದೇಶಿ ಪ್ರಯಾಣದ ಲಾಭವೇನು? ಪ್ರಧಾನಿಯವರ ವಿದೇಶಿ ಪ್ರಯಾಣಕ್ಕೆ ಸಾರ್ವಜನಿಕರ 200 ಕೋಟಿ ರೂ. ಖರ್ಚು ಮಾಡಲಾಗಿದೆ. ಈ ಭೇಟಿಗಳಿಂದ ನಮಗೇನು ಲಾಭವಾಗಿದೆ ಎಂದು ಕಾಂಗ್ರೆಸ್‌ನ ವಕ್ತಾರ ರಣ್‌ದೀಪ್ ಸುರ್ಜಿವಾಲಾ ಪ್ರಶ್ನಿಸಿದ್ದಾರೆ.

ನಮ್ಮ ಎನ್‌ಆರ್‌ಐ ಪ್ರಧಾನಿಯವರು ಸ್ವಾರ್ಥ ಮತ್ತು ಸ್ವಾಸಾಮರ್ಥ್ಯ ಹೆಚ್ಚಿಸಿಕೊಳ್ಳಲು ವಿದೇಶ ಪ್ರವಾಸ ಮಾಡುತ್ತಿದ್ದಾರೆ ಎಂದು ರಣದೀಪ್ ಟೀಕಿಸಿದ್ದಾರೆ. ಕೋಟ್ಯಂತರ ರೂಪಾಯಿ ವಿದೇಶಿ ಹೂಡಿಕೆ ಭಾರತಕ್ಕೆ ಹರಿದುಬರಲಿದೆ ಎಂದು ಪ್ರಧಾನಿ ನೀಡಿದ್ದ ಭರವಸೆಯನ್ನು ರಣದೀಪ್ ಪ್ರಶ್ನಿಸಿದ್ದಾರೆ.

ಪ್ರಧಾನಿಯವರ ವಿದೇಶಿ ಭೇಟಿಯಿಂದ ಪ್ರಧಾನಿಯವರ ರಾಯಭಾರತ್ವ ಶೂನ್ಯವಾಗಿದೆ. ದೇಶದ ಹೊರಗೆ ಪ್ರಧಾನಿ ಏನು ಮಾತನಾಡುತ್ತಾರೆ ಎಂಬುದನ್ನು ಇಲ್ಲಿನ ಬಡವರು ನಿರೀಕ್ಷಿಸುವುದಿಲ್ಲ ಎಂದು ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಪ್ರತಿಕ್ರಿಯಿಸಿದ್ದಾರೆ.

ಪ್ರಧಾನಿ ಮೊದಲಿಗೆ ನೇಪಾಳಕ್ಕೆ ಭೇಟಿ ನೀಡಿದರು. ಆದರೆ ಇಂದು ನೇಪಾಳಿಗರು ಭಾರತದ ವಿರುದ್ಧ ವಿಶ್ವಸಂಸ್ಥೆಯಲ್ಲಿ ಧ್ವನಿ ಎತ್ತಿದೆ. ಮೋದಿ ಅವರು ಪಾಕಿಸ್ತಾನದೊಂದಿಗೆ ಮಾತುಕತೆ ಆರಂಭಿಸಿದರು. ಆದರೆ ಗಡಿಯಲ್ಲಿ ಗುಂಡಿನ ಚಕಮಕಿ ಹೆಚ್ಚಾಗಿದೆ ಎಂದು ಕಾಂಗ್ರೆಸ್ ನಾಯಕ ರಶೀದ್ ಅಲ್ವಿ ಪ್ರತಿಕ್ರಿಯಿಸಿದ್ದಾರೆ.

Write A Comment