ರಾಷ್ಟ್ರೀಯ

ಗೋವುಗಳ ಸೇವೆಗೆ ತಮ್ಮ ಜೀವನವನ್ನೇ ಮುಗಿಪಾಗಿಟ್ಟ ಮುಸ್ಲಿಂ ಕುಟುಂಬ

Pinterest LinkedIn Tumblr

cow

ಜೈಪುರ: ದೇಶದಲ್ಲಿ ಅಸಹಿಷ್ಣುತೆ ಕುರಿತು ಭಾರೀ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ರಾಜಸ್ತಾನದ ಮುಸ್ಲಿಂ ಕುಟುಂಬವೊಂದು ಗೋವುಗಳ ಸೇವೆಗೆ ತಮ್ಮ ಜೀವನವನ್ನೇ ಮುಗಿಪಾಗಿಟ್ಟು ಕೋಮು ಸೌಹಾರ್ದ ಕಾಪಾಡುವ ಕೆಲಸ ಮಾಡುತ್ತಿದೆ.

ಲನ್ದು ತಹಶೀಲ್‌ನ ಲೇದಿ ಗ್ರಾಮದ ಫುಲೆ ಖಾನ್ ಮತ್ತು ಅವರ ಕುಟುಂಬ ೬೦೦ಕ್ಕೂ ಅಧಿಕ ಜಾನುವಾರುಗಳಿಗೆ ಆಶ್ರಯ ನೀಡಿದೆ. ಫುಲೆ ಅವರ ಸಹೋದರ ಆಸು ಖಾನ್ ಅವರು ೧೯೯೫ರಲ್ಲಿ ೨೦ ಜಾನುವಾರು ಸಾಕುವ ಮೂಲಕ ಈ ಮಹತ್ಕಾರ್ಯ ಆರಂಭಿಸಿದ್ದಾರೆ. ಪರಿತ್ಯಕ್ತ ಜಾನುವಾರುಗಳಿಗೆ ಆಶ್ರಯ ನೀಡುವುದರೊಂದಿಗೆ ಮೇವನ್ನು ನೀಡುತ್ತಿದ್ದಾರೆ. ಸುಗ್ಗಿಯ ಕಾಲದಲ್ಲಿ ಜಾನುವಾರುಗಳಿಂದ ಬೆಳೆ ನಷ್ಟವಾಗುವುದನ್ನು ತಡೆದು ಈ ಮೂಲಕ ಬೆಳೆಗಳನ್ನು ಉಳಿಸುತ್ತಿದ್ದಾರೆ.

ಹಿಂದೂ ಮತ್ತು ಮುಸ್ಲಿಮರ ನಡುವೆ ಸಹೋದರತೆ ಬೆಳೆಸಲು ನಾವು ಕೆಲಸ ಮಾಡುತ್ತಿದ್ದೇವೆ. ಈ ಎರಡು ಸಮುದಾಯಗಳ ನಡುವೆ ವಿಶ್ವಾಸ ಬೆಳೆಯದಿದ್ದರೆ ಯಾವುದೇ ದೇಶ ಉಳಿಯಲಾರದು. ಹಿಂದೂಗಳಿಗೆ ಗೋವಿನ ಬಗ್ಗೆ ಪೂಜ್ಯ ಭಾವನೆಯಿದೆ. ಅವರ ಭಾವನೆಗಳಿಗೆ ಮುಸ್ಲಿಮರು ಗೌರವಿಸಿದರೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಫುಲೆ ಹೇಳುತ್ತಾರೆ.

ಗೋವಿನ ಮಾಂಸ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದನ್ನು ಹದೀಸ್ ಹೇಳುತ್ತದೆ. ಆದ್ದರಿಂದ ಈ ಬಗ್ಗೆ ಚರ್ಚೆ ನಡೆಸುವ ಅಗತ್ಯವೇ ಇಲ್ಲ ಎಂದು ಅವರು ಹೇಳಿದ್ದಾರೆ. ರಾಜಸ್ತಾನ ಸರ್ಕಾರ ತಂದಿರುವ ಗೋ ಹತ್ಯೆ ತಡೆ ಕಾಯ್ದೆಯನ್ನು ಸ್ವಾಗತಿಸಿರುವ ಈ ಕುಟುಂಬಕ್ಕೆ ಕೆಲವು ಗ್ರಾಮಸ್ಥರು ದಾನಗಳನ್ನು ನೀಡುತ್ತಿದ್ದಾರೆ. ಪ್ರತಿ ತಿಂಗಳು ಜಾನುವಾರುಗಳ ಮೇವಿಗಾಗಿ ೧ ಲಕ್ಷ ರೂ. ವೆಚ್ಚ ಮಾಡುತ್ತಿದ್ದೇವೆ ಎಂದು ಫುಲೆ ಹೇಳುತ್ತಾರೆ.

Write A Comment