ರಾಷ್ಟ್ರೀಯ

ಜಾತಿ ತಾರತಮ್ಯದಿಂದ ಬೇಸತ್ತು ದಲಿತ ಐಎಎಸ್ ಅಧಿಕಾರಿ ಇಸ್ಲಾಂಗೆ ಮತಾಂತರ

Pinterest LinkedIn Tumblr

umrao-salodia

ಜೈಪುರ್: ರಾಜಸ್ಥಾನದಲ್ಲಿ ಪ್ರಧಾನ ಕಾರ್ಯದರ್ಶಿ ಸ್ಥಾನ ನೀಡಲು ನಿಷೇಧಿಸಿದ್ದನ್ನು ಪ್ರತಿಭಟಿಸಿ ದಲಿತ ಐಎಎಸ್ ಅಧಿಕಾರಿಯೊಬ್ಬರು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. 1978ರ ಬ್ಯಾಚ್‌ನಲ್ಲಿ ಐಎಎಸ್ ಅಧಿಕಾರಿಯಾದ ಉಮ್ರಾವೋ ಸಲೋಡಿಯಾ ಎಂಬವರು ಪ್ರಧಾನ ಕಾರ್ಯದರ್ಶಿಯಾಗಿ ಬಡ್ತಿ ನಿಷೇಧಿಸಿದ್ದಕ್ಕೆ ಪ್ರತಿಭಟಿಸಿ ಇಸ್ಲಾಂಗೆ ಧರ್ಮ ಸ್ವೀಕರಿಸಿದ್ದಾರೆ.

ರಾಜಸ್ಥಾನ ರಸ್ತೆ ಸಾರಿಗೆ ಕಾರ್ಪರೇಷನ್ ಚೇರ್‌ಮೆನ್ ಆಗಿ ಕಾರ್ಯನಿರ್ವಹಿಸುತ್ತಿರುವ ಸಲೋಡಿಯಾ ಈಗ ವಿಆರ್‌ಎಸ್‌ಗೆ ಅರ್ಜಿ ಸಲ್ಲಿಸಿದ್ದಾರೆ. ವಸುಂಧರಾ ರಾಜೇ ಸಿಂಧ್ಯಾ ಸರ್ಕಾರ ಜಾತಿಯ ಹೆಸರಲ್ಲಿ ತನ್ನ ಮೇಲೆ ದೌರ್ಜನ್ಯವೆಸಗುತ್ತಿದೆ ಎಂದು ಇವರು ಆರೋಪಿಸಿದ್ದಾರೆ.

ತನಗೆ ಪ್ರಧಾನ ಕಾರ್ಯದರ್ಶಿಯ ಸ್ಥಾನ ನಿಷೇಧಿಸುವುದರ ಸಲುವಾಗಿಯೇ ಈಗ ಪ್ರಧಾನ ಕಾರ್ಯದರ್ಶಿಯಾಗಿರುವ ಸಿಎಸ್ ರಾಜನ್ ಅವರ ಸೇವಾ ಅವಧಿಯನ್ನು ವಿಸ್ತರಿಸಲಾಗಿದೆ ಎಂಬುದು ಸಲೋಡಿಯಾ ಅವರ ಆರೋಪ . ರಾಜನ್ ಅವರ ಸೇವಾ ಅವಧಿಯನ್ನು ಮಾರ್ಚ್ ವರೆಗೆ ವಿಸ್ತರಿಸಲಾಗಿದೆ. ಇನ್ನು ಮಂದೆ ನನಗೆ ಜ್ಯೂನಿಯರ್ ಅಧಿಕಾರಿಗಳ ಕೈಕೆಳಗೆ ಕೆಲಸ ಮಾಡಲು ಇಷ್ಟವಿಲ್ಲ. ಆದ ಕಾರಣ ವಿಆರ್‌ಎಸ್‌ಗೆ ಅನುಮತಿ ನೀಡಬೇಕೆಂದು ಸಲೋಡಿಯಾ ವಿನಂತಿಸಿದ್ದಾರೆ.

ಜಾತಿ ಆಧಾರದಲ್ಲಿ ತಾರತಮ್ಯ ಮಾಡುವ ಹಿಂದೂ ಧರ್ಮವನ್ನು ತೊರೆದು ಎಲ್ಲರನ್ನೂ ಸಮಾನವಾಗಿ ಕಾಣುವ ಇಸ್ಲಾಂ ಮತವನ್ನು ನಾನು ಸ್ವೀಕರಿಸುತ್ತಿದ್ದೇನೆ. ಮತಾಂತರಗೊಂಡ ನಾನೀಗ ಉಮ್ರಾವೋ ಖಾನ್ ಎಂದು ಅವರು ಹೇಳಿದ್ದಾರೆ.

ಏತನ್ಮಧ್ಯೆ, ಐಎಎಸ್ ಅಧಿಕಾರಿಯವರ ಆರೋಪ ಸತ್ಯಕ್ಕೆ ದೂರವಾದುದು ಎಂದು ಸಂಸತ್ ವ್ಯವಹಾರಗಳ ಸಚಿವ ರಾಜೇಂದ್ರ ರಾಥೋಡ್ ಹೇಳಿದ್ದಾರೆ. ನಮ್ಮ ಸರ್ಕಾರ ಜಾತಿ ತಾರತಮ್ಯ ತೋರಿಸಿದ್ದರೆ ದಲಿತ ಸಮುದಾಯಕ್ಕೆ ಸೇರಿದ ಕೈಲಾಶ್ ಮೇಘ್ವಾಲ್‌ನ್ನು ಸ್ಪೀಕರ್ ಮಾಡುತ್ತಿರಲಿಲ್ಲ. ಇದೀಗ ಸಲೋಡಿಯಾ ಬಗ್ಗೆ ತನಿಖೆ ನಡೆಸಿ ಶಿಸ್ತುಕ್ರಮ ಕೈಗೊಳ್ಳುತ್ತೇವೆ ಎಂದು ರಾಥೋಡ್ ಹೇಳಿದ್ದಾರೆ.

Write A Comment