ರಾಷ್ಟ್ರೀಯ

ಪಠಾಣ್‌ಕೋಟ್ ದಾಳಿ; ಭಾರತದ ಮುಂದಿನ ನಡೆಯೇನು?

Pinterest LinkedIn Tumblr

modi-sharifಕಾಬೂಲ್ ನಲ್ಲಿ ಬೆಳಗ್ಗಿನ ತಿಂಡಿ, ಲಾಹೋರ್ ನಲ್ಲಿ ಮಧ್ಯಾಹ್ನದೂಟ, ನವದೆಹಲಿಯಲ್ಲಿ ರಾತ್ರಿ ಭೋಜನ! ಒಂದು ವಾರದ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಪಾಕ್‌ಗೆ ದಿಢೀರ್ ಭೇಟಿ ನೀಡಿದಾಗ ಅವರ ಒಂದು ದಿನದ ದಿನಚರಿ ಹೀಗಿತ್ತು.

ಮೋದಿ ಪಾಕ್‌ಗೆ ಭೇಟಿ ನೀಡಿ ವಾರ ಕಳೆದಿದೆಯಷ್ಟೇ. ಅಷ್ಟರಲ್ಲಿ ಪಂಜಾಬ್‌ನ ಪಠಾಣ್‌ಕೋಟ್ ವಾಯುನೆಲೆ ಮೇಲೆ ಉಗ್ರ ದಾಳಿಯಾಗಿದೆ. ಈ ಉಗ್ರ ದಾಳಿ ನಡೆಸಿದ್ದರ ಹಿಂದಿನ ಕಾರಣವೇನು? ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಆದರೆ ಈ ದಾಳಿಯ ನಂತರ ಭಾರತ ಯಾವ ರೀತಿಯ ನಡೆಯನ್ನು ಸ್ವೀಕರಿಸಬಹುದು?

ಕಳೆದ 18 ತಿಂಗಳಿನಿಂದ ಇಲ್ಲಿಯವರೆಗೂ ಪ್ರಧಾನಿ ನರೇಂದ್ರ ಮೋದಿ, ಪಾಕಿಸ್ತಾನದೊಂದಿಗೆ ಸೌಹಾರ್ದತೆಯನ್ನು ಕಾಯ್ದುಕೊಳ್ಳುಲು ಯತ್ನಿಸಿದ್ದಾರೆ. ತಮ್ಮ ಪ್ರಮಾಣವಚನ ಸ್ವೀಕಾರಕ್ಕೆ ಶರೀಫ್ ಅವರನ್ನು ಕರೆದಿದ್ದು, ಶೃಂಗಸಭೆಯಲ್ಲಿ ಭಾಗವಹಿಸಿದಾಗ ಮಾತುಕತೆ ನಡೆಸಿದ್ದು, ಇತ್ತೀಚೆಗೆ ಪಾಕ್‌ಗೆ ದಿಢೀರ್ ಭೇಟಿ ನೀಡಿದ್ದು ಇವೆಲ್ಲವೂ ಪಾಕ್‌ನೊಂದಿಗೆ ಸಂಬಂಧವನ್ನು ಗಟ್ಟಿಗೊಳಿಸುವ ಕಾರಣದಿಂದಾಗಿತ್ತು. ಆದರೆ ಈಗೇನು ಮಾಡಬಹುದು?

1. 2008 ರಲ್ಲಿ ಮುಂಬೈ ದಾಳಿ ನಡೆದಾಗ ಮನಮೋಹನ್ ಸಿಂಗ್ ಸರ್ಕಾರ ಪಾಕಿಸ್ತಾನದ ವಿರುದ್ಧ ಮಿಲಿಟರಿ ಕಾರ್ಯಾಚರಣೆ ನಡೆಸಲು ಚಿಂತಿಸಿತ್ತು. ಲಷ್ಕರೆ ತೊಯ್ಬಾ ಉಗ್ರ ಸಂಘಟನೆಯನ್ನು ಬೇರು ಸಮೇತ ಕಿತ್ತೊಗೆಯುವ ಕಾರ್ಯವಾಗಬೇಕೆಂದು ಸೇನಾ ಅಧಿಕಾರಿಗಳೊಂದಿಗೆ ಚರ್ಚೆಯೂ ನಡೆದಿತ್ತು. ಆಮೇಲೆ ಇಂಥಾ ಕಾರ್ಯಗಳನ್ನು ಮಾಡುವುದು ಬೇಡ ಎಂದು ಯುಪಿಎ ತನ್ನ ನಿಲುವು ಬದಲಿಸಿತು. ಹಾಗೆ ಮಾಡಲು ಕಾರಣವೂ ಇದೆ.

ಪಾಕ್ ಜತೆಗಿನ ಸೌಹಾರ್ದತೆಗೆ ಧಕ್ಕೆಯಾಗುವುದು ಒಂದು ಕಾರಣವಾದರೆ, ಹಾಗೇನಾದರೂ ಮಾಡಿದರೆ ಪಾಕ್ ನಲ್ಲಿರುವ ಎಲ್ಲ ಉಗ್ರ ಸಂಘಟನೆಗಳು ಜತೆಯಾಗಿ ಭಾರತದ ಮೇಲೆ ದಾಳಿ ನಡೆಸಿದರೆ? ಎಂಬ ಆತಂಕ. ಇದೇ ಆತಂಕ ಮೋದಿ ಸರ್ಕಾರವನ್ನೂ ಕಾಡುತ್ತಿರಬಹುದು.

2. ಪ್ರತೀ ಬಾರಿಯೂ ಪಾಕ್ ಮತ್ತು ಭಾರತದ ನಡುವೆ ಮಾತುಕತೆಯಾದಾಗ ಅಲ್ಲಿ ಕಾಶ್ಮೀರ ಸಮಸ್ಯೆ ಪ್ರಸ್ತಾಪವಾಗುತ್ತದೆ. ಆದರೆ ಭಾರತದಲ್ಲಿ ಯಾರ ಆಡಳಿತವೇ ಇರಲಿ, ಯಾವುದೇ ಸರ್ಕಾರಗಳು ಕಾಶ್ಮೀರವನ್ನು ಬಿಟ್ಟುಕೊಡಲು ಒಪ್ಪಿಕೊಂಡಿಲ್ಲ, ಒಪ್ಪಿಕೊಳ್ಳುವುದೂ ಇಲ್ಲ. ಮೋದಿ ಲಾಹೋರ್‌ಗೆ ದಿಢೀರ್ ಭೇಟಿ ಕೊಟ್ಟ ನಂತರ ಪಾಕ್ ನಡುವಿನ ಸಂಬಂಧ ಗಟ್ಟಿಯಾಗುತ್ತದೆ ಎಂಬ ಆಶಯವಿತ್ತು. ಆದರೆ ಪಾಕ್ ಪಠಾಣ್‌ಕೋಟ್‌ನಲ್ಲಿ ದಾಳಿ ನಡೆಸುವ ಮೂಲಕ ಮುಂದಿನ ಮಾತುಕತೆಯನ್ನು ಅತಂತ್ರದಲ್ಲಿರಿಸಿದೆ. ಯುದ್ಧ ನಡೆದಾಗಲೂ, ನಡೆದ ನಂತರವೂ ಉಭಯ ರಾಷ್ಟ್ರಗಳು ಮಾತುಕತೆ ನಡೆಸಿವೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ನೀವೇನೇ ಮಾತುಕತೆ ನಡೆಸಿದರೂ, ನಾವು ದಾಳಿ ನಡೆಸುವುದನ್ನು ನಿಲ್ಲಿಸಲಾರೆವು ಎಂಬ ಉದ್ದಟತನವನ್ನು ಪಾಕ್ ತೋರಿಸುತ್ತಿದೆ. ಹೀಗಿರುವಾಗ ಪಾಕ್ ಜತೆ ಯಾವ ರೀತಿ ಹಸ್ತಲಾಘವ ಮಾಡಬೇಕೆಂಬ ಪ್ರಶ್ನೆ ಸರ್ಕಾರದ ಮುಂದಿದೆ.

ಅಷ್ಟೇ ಅಲ್ಲ, ಮುಂಬರುವ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಫ್ರೆಂಚ್ ಅಧ್ಯಕ್ಷರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಇತ್ತ ಫ್ರಾನ್ಸ್ ಮತ್ತು ಇಸಿಸ್ ನಡುವೆ ಸಂಘರ್ಷಗಳು ನಡೆಯುತ್ತಲೇ ಇವೆ. ಇಂಥಾ ಪರಿಸ್ಥಿತಿಯಲ್ಲಿ ಭಾರತ ಪಾಕ್ ಸೇರಿದಂತೆ ಇನ್ನಿತರ ಉಗ್ರ ಸಂಘಟನೆಗಳ ಮೇಲೆ ನಿಗಾ ಇರಿಸಲೇ ಬೇಕು. ಯಾಕೆಂದರೆ ಇಲ್ಲಿ ಸರ್ಕಾರ ತೆಗೆದುಕೊಳ್ಳುವ ಪ್ರತೀ ನಿಲುವು ಹೆಚ್ಚು ಮಹತ್ವದ್ದಾಗಿರುತ್ತದೆ.

Write A Comment