ಗುರುದಾಸ್ ಪುರ: ಎಕೆ-47 ಹಿಡಿದಿದ್ದ ನಾಲ್ಕೈದು ಸದಸ್ಯರ ಗುಂಪೊಂದು ಏಕಾಏಕಿ ನನ್ನ ಕಾರನ್ನು ಅಡ್ಡಹಾಕಿ, ನನ್ನಲ್ಲಿದ್ದ ಮೊಬೈಲ್ ಕಿತ್ತುಕೊಂಡು ಕಾರು ಸಮೇತ ಅಪಹರಿಸಿದರು. ನಾನು ದೇವಸ್ಥಾನಕ್ಕೆ ಹೋಗುತ್ತಿರುವ ಕಾರಣ ನನ್ನ ಬಳಿ ಗನ್ ಕೂಡ ಇರಲಿಲ್ಲ. ಹೀಗಾಗಿ ಅವರನ್ನು ಎದುರಿಸುವುದು ನನ್ನಿಂದ ಸಾಧ್ಯವಾಗಲಿಲ್ಲ ಎಂದು ಉಗ್ರರಿಂದ ಅಪಹರಿಸಲ್ಪಟ್ಟ ಗುರುದಾಸ್ ಪುರದ ಪೊಲೀಸ್ ವರಿಷ್ಠಾಧಿಕಾರಿ ಸಲ್ವಿಂದರ್ ಸಿಂಗ್ ಹೇಳಿದ್ದಾರೆ.
ಮಂಗಳವಾರ ಬೆಳಗ್ಗೆ ಇಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಲ್ವಿಂದರ್ ಸಿಂಗ್, ಕಾರಿನಲ್ಲಿ ದೇವಸ್ಥಾನಕ್ಕೆ ಹೋಗುತ್ತಿದ್ದ ವೇಳೆ ನನ್ನ ಕಾರನ್ನು ಅಡ್ಡಹಾಕಿದರು. ತಕ್ಷಣ ಎಕೆ-47 ಹಿಡಿದ ನಾಲ್ಕೈದು ಮಂದಿ ಕಾರನ್ನು ಸುತ್ತುವರಿದು ಬೆದರಿಸಿದರು. ಓರ್ವ ನನ್ನ ಬಳಿ ಇದ್ದ ಮೊಬೈಲ್ ಕಿತ್ತುಕೊಂಡ. ನಾನು ಅವರಿಂದ ತಪ್ಪಿಸಿಕೊಳ್ಳಲು ಸಾಧ್ಯತೆಯೇ ಇರಲಿಲ್ಲ. ನನ್ನ ಬಳಿ ಯಾವುದೇ ಶಸ್ತ್ರಾಸ್ತ್ರ ಕೂಡ ಇರಲಿಲ್ಲ. ಅವರು ಉರ್ದು, ಹಿಂದಿ, ಪಂಜಾಬಿ ಭಾಷೆಗಳಲ್ಲಿ ಮಾತನಾಡಿಕೊಳ್ಳುತ್ತಿದ್ದರು. ಆ ಕ್ಷಣಲ್ಲಿ ನಾನು ಏನೂ ತೋಚದಾದೆ. ಏನನ್ನೂ ಮಾಡುವ ಸ್ಥಿತಿ ಇರಲಿಲ್ಲ. ಅಷ್ಟಕ್ಕೂ ಅವರು ನನ್ನನ್ನು ಅಡ್ಡ ಹಾಕಿದಾಗ ನಾನು ಪೊಲೀಸ್ ವರಿಷ್ಠಾಧಿಕಾರಿ ಎನ್ನುವುದು ಅವರಿಗೆ ಗೊತ್ತಿರಲಿಲ್ಲ. ಬಳಿಕ ಈ ಮಾಹಿತಿಯನ್ನೆಲ್ಲ ಪಡೆದುಕೊಂಡರು ಎಂದಿದ್ದಾರೆ.
ಉಗ್ರರು ಪಠಾಣ್ಕೋಟ್ ವಾಯುನೆಲೆಯ ಮೇಲೆ ದಾಳಿ ನಡೆಸುವುದಕ್ಕೂ ಒಂದು ದಿನ ಮೊದಲು ಎಸ್ಪಿ ಸಲ್ವಿಂದರ್ ಸಿಂಗ್ ಅವರ ಅಪಹರಣವಾಗಿತ್ತು. ಉಗ್ರರು ಅವರದೇ ವಾಹನದಲ್ಲಿ ಸೇನಾ ಸಮವಸ್ತ್ರ ಧರಿಸಿ ಒಳಪ್ರವೇಶಿಸಿರುವುದು ಈಗಾಗಲೇ ಗೊತ್ತಾಗಿರುವ ಸಂಗತಿಯಾಗಿದೆ.