ರಾಷ್ಟ್ರೀಯ

ಪಠಾಣ್‌ಕೋಟ್ ದಾಳಿಗೆ ಪೊಲೀಸರು ಮಾಡಿದ ಸಣ್ಣ ತಪ್ಪು ಕಾರಣವಾಯಿತೇ..?

Pinterest LinkedIn Tumblr

pathanನವದೆಹಲಿ, ಜ.5-ಕಳೆದ ಶುಕ್ರವಾರ ಬೆಳಗ್ಗೆ ನಡೆದ ಗುರುದಾಸ್‌ಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಲ್ವಿಂದರ್‌ಸಿಂಗ್ ಅಪಹರಣ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ, ತಕ್ಷಣ ಕಾರ್ಯಪ್ರವೃತ್ತರಾಗಿದ್ದರೆ, ಪಠಾಣ್‌ಕೋಟ್ ವಾಯುನೆಲೆಯ ಮೇಲಿನ ಉಗ್ರರ ವಿಧ್ವಂಸಕ ಕೃತ್ಯವನ್ನು ತಡೆಯಬಹುದಿತ್ತೇ…? ಏಳು ಮಂದಿ ವೀರಯೋಧರ ಜೀವಗಳು ಉಳಿಯುತ್ತಿದ್ದವೇ….? ಇದೀಗ ಈ ಪ್ರಶ್ನೆಗಳಿಗೆ ಹೌದು ಎಂಬ ಉತ್ತರ ಲಭ್ಯವಾಗುತ್ತಿದೆ. ಇದನ್ನು ಸ್ವತಃ ಹಿರಿಯ ಪೊಲೀಸ್ ಅಧಿಕಾರಿಗಳೇ ಬಹಿರಂಗಪಡಿಸಿದ್ದಾರೆ. ಆದರೆ, ವರಿಷ್ಠಾಧಿಕಾರಿಯವರು ತಮ್ಮ ಅಪಹರಣದ ಸುದ್ದಿ ತಿಳಿದಾಗ ಅದೇಕೆ ಪೊಲೀಸರು ತೀಕ್ಷ್ಣವಾಗಿ ಪ್ರತಿಕ್ರಿಯಿಸಲಿಲ್ಲ ಎಂಬುದನ್ನು ತಿಳಿಸಿದ್ದಾರೆ.
ಪಠಾಣ್‌ಕೋಟ್ ವಾಯುನೆಲೆಯ ಮೇಲಿನ ಭಯೋತ್ಪಾದಕ ದಾಳಿಗೆ ಕಾರಣವಾದ ಹಲವು ಭದ್ರತಾ ವೈಫಲ್ಯಗಳಲ್ಲಿ ಇದೂ ಒಂದು ಎನ್ನುತ್ತಾರೆ ಅಧಿಕಾರಿಗಳು.
ವರಿಷ್ಠಾಧಿಕಾರಿಯನ್ನು ಉಗ್ರರು ವಾಹನ ಸಮೇತ ಅಪಹರಿಸಿದ ಪ್ರಕರಣವನ್ನು ಪೊಲೀಸರೇಕೆ ಕಡೆಗಣಿಸಿದರು ಎಂಬುದಕ್ಕೂ ಅಧಿಕಾರಿಗಳೇ ಸಮಜಾಯಿಷಿ ನೀಡಿದ್ದಾರೆ. ಅದು ಹೀಗಿದೆ.. ಉಗ್ರರಿಂದ ಅಪಹರಣಗೊಂಡ ಎಸ್‌ಪಿ ಸಲ್ವಿಂದರ್ ಸಿಂಗ್ ಸುದ್ದಿಯನ್ನು ಪೊಲೀಸರು ಸಾಮಾನ್ಯವಾಗಿ ಪರಿಗಣಿಸಿದರು. ಇದೊಂದು ಸರ್ವೇ ಸಾಮಾನ್ಯವಾದ ಶಸ್ತ್ರಾಸ್ತ್ರ ಅಪಹರಣಕಾರರ ಕೃತ್ಯ ಎಂದೇ ಭಾವಿಸಿದ್ದರು. ಇದಕ್ಕೆ ಮುಖ್ಯ ಕಾರಣ ಸಲ್ವಿಂದರ್ ಸಿಂಗ್ ಶುದ್ಧ ಚಾರಿತ್ರ್ಯ ಹೊಂದಿದ ವ್ಯಕ್ತಿಯಲ್ಲ. ಉಗ್ರರಿಂದ ಅಪಹರಣಕ್ಕೊಳಗಾಗುವ ಮುನ್ನ ಸಲ್ವಿಂದರ್ ಸಿಂಗ್‌ರನ್ನು ಮಹಿಳಾ ಪೇದೆಯೊಬ್ಬರ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಕರಣ ಕುರಿತಾದ ತನಿಖೆಗೆ ಒಳಪಡಿಸಲಾಗಿತ್ತು. ಈ ಎಲ್ಲಾ ಹಿನ್ನೆಲೆಗಳಿಂದಾಗಿ ಪೊಲೀಸರು ಅವರನ್ನು ಅಷ್ಟೇನೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ ಎಂದು ಪಂಜಾಬ್‌ನ ಎರಡನೇ ದರ್ಜೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತನ್ನ ವಿರುದ್ಧದ ತನಿಖೆ ನಂತರ ಸಲ್ವಿಂದರ್ ಸಿಂಗ್ ಪೊಲೀಸ್ ಚಿಹ್ನೆಗಳಿಲ್ಲದ ವಾಹನವೊಂದರಲ್ಲಿ ಇನ್ನಿಬ್ಬರು ವ್ಯಕ್ತಿಗಳೊಂದಿಗೆ ಪಾಕಿಸ್ಥಾನ ಗಡಿಗೆ 25 ಕಿ.ಮೀ ದೂರದಲ್ಲಿರುವ ದೇವಸ್ಥಾನವೊಂದಕ್ಕೆ ತೆರಳುತ್ತಿದ್ದರು. ಅಲ್ಲದೆ ಮಹಿಳಾ ಪೇದೆ ಮೇಲಿನ ಲೈಂಗಿಕ ಕಿರುಕುಳದ ಹಿನ್ನೆಲೆಯಲ್ಲಿ ವರ್ಗಾವಣೆ ಕೂಡ ಮಾಡಲಾಗಿತ್ತು. ಈ ಹಗರಣದ ವಿಚಾರಣೆ ವೇಳೆ ಏನು ನಡೆಯಿತು ಎಂಬ ಬಗ್ಗೆ ಮಾಹಿತಿಗಳು ಲಭ್ಯವಾಗಿಲ್ಲ. ಪೊಲೀಸ್ ಇಲಾಖೆಯ ಈ ಸಾಮಾನ್ಯ ಘಟನೆ, ಇದಾದ 12 ತಾಸುಗಳ ಅವಧಿಯಲ್ಲಿ ದೇಶವನ್ನೇ ಬೆಚ್ಚಿ ಬೀಳಿಸಿದ ಭೀಕರ ದುರಂತವೊಂದಕ್ಕೆ ಕಾರಣವಾಗಿದ್ದು ಹೀಗೆ. ಪಠಾಣ್‌ಕೋಟ್ ವಾಯುನೆಲೆ ಅಂದರೆ ಈ ದೇಶದ ವ್ಯೂಹಾತ್ಮಕ ಸೇನಾ ನೆಲೆಗಳಲ್ಲೊಂದು. ಇದರ ಮೇಲೆ ದಾಳಿ ಎನ್ನುವುದು ಭಾರತದ ಹೃದಯಕ್ಕೇ ಇಟ್ಟ ಗುರಿಯಾಗಿತ್ತು. ಈ ಘಟನೆಯಲ್ಲಿ ಈ ದೇಶದ 7 ಅಮೂಲ್ಯ ಜೀವಗಳು ಬಲಿಯಾದವು. ಯೋಧರ ಗುಂಡಿಗೆ 6 ಉಗ್ರರು ಈಗಾಗಲೇ ಬಲಿಯಾಗಿದ್ದು, ವಾಯುನೆಲೆ ಕಟ್ಟಡದಲ್ಲಿ ಅಡಗಿರುವ ಉಗ್ರರಿಗಾಗಿ ನಾಲ್ಕನೇ ದಿನವಾದ ಇಂದೂ ಬೇಟೆ ಮುಂದುವರಿದಿದೆ.

Write A Comment