ರಾಷ್ಟ್ರೀಯ

ಪಠಾಣ್‌ಕೋಟ್ ಉಗ್ರರ ದಾಳಿ ಅಫ್ಜಲ್ ಗುರು ನೇಣಿನ ಪ್ರತಿಕಾರವೇ..?

Pinterest LinkedIn Tumblr

afzal

ಪಠಾಣ್‌ಕೋಟ್, ಜ.6- ಪಂಜಾಬ್‌ನ ಪಠಾಣ್‌ಕೋಟ್ ವಾಯುನೆಲೆ ಮೇಲಿನ ಪಾಕ್ ಮೂಲದ ಭಯೋತ್ಪಾದಕರ ದಾಳಿ ಹಾಗೂ ಆಫ್ಘಾನಿ ಸ್ಥಾನದ ಮಜರ್-ಇ- ಷರೀಫ್‌ನಲ್ಲಿರುವ ಭಾರತೀಯ ದೂತಾವಾಸದ ಮೇಲಿನ ದಾಳಿಗಳು ಸಂಸತ್ ಮೇಲಿನ ದಾಳಿಯ ರೂವಾರಿ ಅಫ್ಜಲ್‌ಗುರು ಗಲ್ಲಿಗೇರಿಸಿದ್ದರ ಪ್ರತೀಕಾರವೇ….? ಹೌದು ಎನ್ನುತ್ತಿವೆ ಗುಪ್ತಚರ ಇಲಾಖೆ ಮೂಲಗಳು.

ಇದಕ್ಕೆ ಜ್ವಲಂತ ನಿದರ್ಶನವೆಂದರೆ ಮಜರ್-ಇ-ಷರೀಫ್‌ನಲ್ಲಿರುವ ಭಾರತೀಯ ದೂತಾವಾಸದ ಗೋಡೆಯ ಮೇಲೆ ರಕ್ತದಲ್ಲಿ ಬರೆದಿರುವ ಬರಹ. ಒಂದು ಸಂದೇಶದಲ್ಲಿ ಅಫ್ಜಲ್ ಗುರು ಕ ಇಂತೆಕಮ್ ಎಂದಿದ್ದರೆ, ಇನ್ನೊಂದರಲ್ಲಿ ಏಕ್ ಶಾಹೀದ್, ಹಜಾರ್ ಫಿದಾಯೀನ್ (ಅಫ್ಜಲ್‌ಗುರು ಗಲ್ಲಿಗೆ ಸೇಡು ಮತ್ತು ಒಬ್ಬ ಹುತಾತ್ಮನಿಗೆ ಸಾವಿರ ಆತ್ಮಾಹುತಿ ಬಾಂಬರ್‌ಗಳು) ಎಂದು ಹೇಳಲಾಗಿದೆ.

ಮಜರ್-ಇ-ಷರೀಫ್ ರಾಯಭಾರ ಕಚೇರಿ ಮೇಲಿನ ದಾಳಿ ವಿರುದ್ಧದ ಕಾರ್ಯಾಚರಣೆ ಮುಗಿದಿದೆ. ಭಾರತೀಯರೆಲ್ಲರೂ ಪಾರಾಗಿದ್ದಾರೆ. ಭಾರತೀಯರ ರಕ್ಷಣೆಗಾಗಿ ಸ್ವತಃ ಆ ಪ್ರಾಂತ್ಯದ ಗವರ್ನರ್ ಅವರೇ ಬಂದೂಕು ಹಿಡಿದು ಉಗ್ರರ ವಿರುದ್ಧ ಹೋರಾಡಿರುವ ಘಟನೆಯೂ ನಡೆದಿದೆ.

ಆದರೆ ಪಠಾಣ್‌ಕೋಟ್ ವಾಯುನೆಲೆ ಮೇಲಿನ ದಾಳಿ ಪ್ರಕರಣದಲ್ಲಿ ಗುಂಡಿನ ಕಾಳಗ ನಿಂತಿದ್ದರೂ ಉಗ್ರರ ಶೋಧಕಾರ್ಯ ಮುಂದುವರಿದಿದೆ. ಈ ಎರಡೂ ದಾಳಿಗಳ ಹಿಂದೆ ಅಫ್ಜಲ್‌ಗುರುವನ್ನು ಭಾರತ ಸರ್ಕಾರ ಗಲ್ಲಿಗೇರಿಸಿದ್ದರ ಸೇಡಿನ ಹಗೆಯಿದೆ ಎಂಬುದನ್ನು ತನಿಖಾಧಿಕಾರಿಗಳು ಕೂಡ ನಂಬುವಂತಹ ಸ್ಥಿತಿಯಿದೆ. ಈ ಮಧ್ಯೆ ದಾಳಿಗೂ ಮುನ್ನ ಉಗ್ರರಿಂದ ಅಪಹರಣಕ್ಕೊಳಗಾಗಿದ್ದ ಎಸ್‌ಪಿ ಸೆಲ್ವಿಂದರ್ ಸಿಂಗ್, ಅವರ ಆಪ್ತ ಮಿತ್ರ, ಚಿನ್ನದ ವ್ಯಾಪಾರಿ ರಾಜೇಶ್ ಹಾಗೂ ಅಡಿಗೆ ಸಹಾಯಕ, ಈ ಮೂವರನ್ನೂ ಅಧಿಕಾರಿಗಳು ತನಿಖೆಗೆ ಒಳಪಡಿಸಿದ್ದಾರೆ.

Write A Comment