ರಾಷ್ಟ್ರೀಯ

ಸ್ವಾತಂತ್ರ್ಯಾನಂತರದ ಭಾರತ ಕಂಡ ಏಕೈಕ ಮುಸ್ಲಿಂ ಗೃಹ ಸಚಿವ ಸಯೀದ್

Pinterest LinkedIn Tumblr

sayeedಶ್ರೀನಗರ, ಜ.7-ಇಂದು ವಿಧಿವಶರಾದ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮುಫ್ತಿ  ಮೊಹಮ್ಮದ್ ಸಯೀದ್ ವಿನಮ್ರ, ಸಜ್ಜನ ರಾಜಕಾರಣಿ. ನ್ಯಾಯಾಲಯದಲ್ಲಿ ಸಾಮಾನ್ಯ ವಕೀಲ ಎನಿಸಿದ್ದ ಮುಫ್ತಿ ಸ್ವಾತಂತ್ರ್ಯಾನಂತರದ ಭಾರತ ಕಂಡ ಏಕೈಕ ಮುಸ್ಲಿಂ ಗೃಹ ಸಚಿವರಾಗಿದ್ದು ಅವರ ವ್ಯಕ್ತಿಗತ ಸಾಧನೆಯ ಧ್ಯೋತಕ. 1936ರ ಜ.12 ರಂದು ಜಬ್‌ಬೆಹರಾ ಜಿಲ್ಲೆಯ ಬಾಬಾ ಮೊಹಲ್ಲಾದಲ್ಲಿ ಜನಿಸಿದ  ಸಯೀದ್, ಇನ್ನು ಐದೇ ದಿನ ಬದುಕಿದ್ದರೆ 80ನೇ ವಸಂತಕ್ಕೆ ಕಾಲಿಡುತ್ತಿದ್ದರು. ಕಾನೂನು ಪದವಿ ಪಡೆದ ನಂತರ ಸಯೀದ್, 1950ರ ದಶಕದಲ್ಲಿ ಜಿ.ಎಂ.ಸಾದಿಕ್ ಅವರ ಡೆಮಾಕ್ರಟಿಕ್ ನ್ಯಾಷನಲ್ ಕಾನ್ಫರೆನ್ಸ್ ಸೇರುವ ಮೂಲಕ ರಾಜಕೀಯ ಪ್ರವೇಶಿಸಿದರು. ಈ ತರುಣ ವಕೀಲನ ಉತ್ಸಾಹ, ಸಾಮರ್ಥ್ಯಗಳನ್ನು ಗುರುತಿಸಿದ ಸಾದಿಕ್ ಪಕ್ಷದ ಜಿಲ್ಲಾ ಸಂಚಾಲಕರನ್ನಾಗಿ ನೇಮಿಸಿದರು.

1962ರಲ್ಲಿ ಜಿಜ್ ಬೆಹರಾ ಶಾಸಕನಾಗಿ ಆಯ್ಕೆಯಾದರು. ಅಲ್ಲಿಂದ ಇಲ್ಲಿಯವರೆಗೆ ಅವರು ಹಿಂದಿರುಗಿ ನೋಡಲೇ ಇಲ್ಲ. ವಿಧಾನಸಭೆ ಪ್ರವೇಸಿಸಿದ ಸಯೀದ್, ರಾಜ್ಯ (ಸಹಾಯಕ) ಸಚಿವರಾಗಿದರು. ಆಗ ಸಾದಿಕ್ ಮುಖ್ಯಮಂತ್ರಿಯಾಗಿದ್ದರು.

ಕಾರಣಾಂತರ ಡಿಎನ್‌ಸಿಯಿಂದ ಹೊರ ನಡೆದ ಅವರು, ರಾಷ್ಟ್ರೀಯ ಕಾಂಗ್ರೆಸ್ ಸೇರಿದರು. 1972ರಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದ ಅವರು ಸಂಪುಟ ಸಚಿವರಾದರು. ಅದರ ಬೆನ್ನಲ್ಲೇ ಕಾಂಗ್ರೆಸ್ (ರಾಜ್ಯ) ಅಧ್ಯಕ್ಷರಾದರು.  ಅಲ್ಲಿಂದ 2 ದಶಕಗಳ ಕಾಲ ಜಮ್ಮು-ಕಾಶ್ಮೀರದ ರಾಜಕೀಯ ಪರಿಸ್ಥಿತಿ ಅಸ್ಥಿರವಾಗಿತ್ತು. ಭಯೋತ್ಪಾದಕರ ಆರ್ಭಟವೂ ಹೆಚ್ಚಿತ್ತು. 1989ರಲ್ಲಿ ಸಯೀದ್ ಕೇಂದ್ರದಲ್ಲಿ ಗೃಹ ಖಾತೆ ಅಲಂಕರಿಸಿದರು. ದೇಶ ಕಂಡ ಏಕೈಕ ಮುಸ್ಲಿಂ ಗೃಹ ಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆಗ ಕೇಂದ್ರದಲ್ಲಿ ಜನತಾ ಸರ್ಕಾರವಿತ್ತು. ಇದೇ ವೇಳೆ ಅವರ ದ್ವಿತೀಯ ಪುತ್ರಿಯ ಅಪಹರಣವಾಗಿದ್ದು, ಅವರ ಬಿಡುಗಡೆಗಾಗಿ ಉಗ್ರರ ವಿನಿಮಯಕ್ಕೆ ಸರ್ಕಾರ ಕೈ ಹಾಕಿದ್ದು ಎಲ್ಲಾ ಈಗ ಇತಿಹಾಸ.

ನಂತರದ ಬೆಳವಣಿಗೆಗಳಲ್ಲಿ ಪಿಡಿಪಿ ಸ್ಥಾಪಿಸಿದ ಅವರು, 2002ರ ನವೆಂಬರ್ 2 ರಂದು ಜಮ್ಮು-ಕಾಶ್ಮೀರ ಮುಖ್ಯಮಂತ್ರಿಯಾಗಿ 3 ವರ್ಷ ಅಧಿಕಾರ ನಡೆಸಿದರು. ಆಗ ಕಾಂಗ್ರೆಸ್ ಬೆಂಬಲ ನೀಡಿತ್ತು. ನಂತರ 2015ರಲ್ಲಿ ಬಿಜೆಪಿ ಮೈತ್ರಿಯೊಂದಿಗೆ, ಎರಡನೇ ಅವಧಿಗೆ ಮುಖ್ಯಮಂತ್ರಿಯಾದರು. ಮುಫ್ತಿ ಮೊಹಮ್ಮದ್ ಸಯೀದ್ ತಮ್ಮ ರಾಜಕೀಯ ಬದುಕಿನುದ್ದಕ್ಕೂ ಜಮ್ಮು-ಕಾಶ್ಮೀರ ಪ್ರತ್ಯೇಕತಾವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಅನೇಕ ಬಾರಿ ಉಗ್ರರು (ಪ್ರತ್ಯೇಕತಾವಾದಿಗಳು) ಸಯೀದ್ ಹಾಗೂ ಅವರ ಕುಟುಂಬದವರ ಮೇಲೆ ದಾಳಿಗಳನ್ನು ನಡೆಸಿದ್ದಾರೆ. ಆದರೂ ಎದೆಗುಂದದೆ, ಅವನ್ನೆಲ್ಲಾ ಧೈರ್ಯವಾಗಿ ಎದುರಿಸಿದ ಸಯೀದ್ ಸಜ್ಜನರಷ್ಟೇ ಅಲ್ಲದೆ ದಿಟ್ಟರೂ ಆಗಿದ್ದರು.

Write A Comment