ನವದೆಹಲಿ: ‘ದೆಹಲಿ ಸರ್ಕಾರವು 2016ರ ಜನವರಿ 1ರಿಂದ ಜಾರಿಗೊಳಿಸಿರುವ ‘ಸಮ-ಬೆಸ ವಾಹನ ಸಂಚಾರ ವ್ಯವಸ್ಥೆಯು’ ಜನವರಿ 11ರವರೆಗೆ ಮುಂದುವರಿಯುತ್ತದೆ. ವಿಷಯದ ಬಗ್ಗೆ ಜನವರಿ 11ರಂದು ಆದೇಶ ನೀಡುತ್ತೇವೆ’ ಎಂದು ದೆಹಲಿ ಹೈಕೋರ್ಟ್ ಶುಕ್ರವಾರ ಹೇಳಿದೆ.
ಇದಕ್ಕೆ ಮುನ್ನ ಸಮ-ಬೆಸ ವಾಹನ ಸಂಚಾರ ವ್ಯವಸ್ಥೆ ಜಾರಿಗೊಳಿಸಿದ ಬಳಿಕ ದೆಹಲಿಯಲ್ಲಿ ವಾಹನ ದಟ್ಟಣೆಯ ವೇಳೆಯಲ್ಲಿ ಮಾಲಿನ್ಯ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ದೆಹಲಿ ಸರ್ಕಾರ ಸುಪ್ರೀಂಕೋರ್ಟಿಗೆ ತಿಳಿಸಿತು.
‘ನಮಗೆ 15 ದಿನಗಳು ಸಾಕಾಗುವುದಿಲ್ಲ. ಅಗತ್ಯ ಬಿದ್ದಲ್ಲಿ ಅದರಿಂದಾಚೆಗೂ ನಾವು ಹೋಗಬೇಕಾಗುತ್ತದೆ ಸರ್ಕಾರ ಹೈಕೋರ್ಟ್ಗೆ ತಿಳಿಸಿತು. ರಾಜಧಾನಿಯ ವಾಹನ ಮಾಲಿನ್ಯ ತಗ್ಗಿಸುವ ಸಲುವಾಗಿ ಸಮ-ಬೆಸ ನೋಂದಣಿ ಸಂಖ್ಯೆ ಆಧಾರದಲ್ಲಿ ಖಾಸಗಿ ವಾಹನಗಳು ದಿನ ಬಿಟ್ಟು ದಿನ ಸಂಚರಿಸುವ ಹೊಸ ವ್ಯವಸ್ಥೆಯನ್ನು ದೆಹಲಿಯ ಆಪ್ ಸರ್ಕಾರ ದೇಶದಲ್ಲೇ ಇದೇ ಮೊದಲ ಬಾರಿಗೆ ಪ್ರಾಯೋಗಿಕವಾಗಿ ಜಾರಿಗೆ ತಂದಿದೆ.