ರಾಷ್ಟ್ರೀಯ

ಅಮೀರ್ ಖಾನ್ ರನ್ನು ದೇಶದ್ರೋಹಿ ಎಂದು ಕರೆದಿಲ್ಲ

Pinterest LinkedIn Tumblr

aamir-tiwariನವದೆಹಲಿ: ಖ್ಯಾತ ಬಾಲಿವುಡ್ ನಟ ಅಮೀರ್ ಖಾನ್ ರನ್ನು ತಾವು ದೇಶದ್ರೋಹಿ ಎಂದು ಕರೆದಿಲ್ಲ ಎಂದು ಬಿಜೆಪಿ ಮುಖಂಡ ಹಾಗೂ ಸಂಸದ ಮನೋಜ್ ತಿವಾರಿ ಶನಿವಾರ ಹೇಳಿದ್ದಾರೆ.

ನವದೆಹಲಿಯಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ಸಂಸದ ಮನೋಜ್ ತಿವಾರಿ ಅವರು, ಕೆಲ ರಾಷ್ಟ್ರೀಯ ದಿನಪತ್ರಿಕೆಗಳಲ್ಲಿ ಪ್ರಕಟವಾಗಿರುವಂತೆ ತಾವು ಅಮಿರ್  ಖಾನ್ ರನ್ನು ದೇಶದ್ರೋಹಿ ಎಂದು ಕರೆದಿಲ್ಲ. ನನ್ನ ಹೇಳಿಕೆಯನ್ನು ತಿರುಚಲಾಗಿದ್ದು, ನನ್ನ ಘನತೆಗೆ ಕಳಂಕ ಹಚ್ಚುವ ಪ್ರಯತ್ನ ಇದಾಗಿದೆ ಎಂದು ಕಿಡಿಕಾರಿದ್ದಾರೆ.

“ಸ್ಥಾಯಿ ಸಮಿತಿ ಸಭೆ ವೇಳೆ ನಾನು ಹೇಳಿದ ಹೇಳಿಕೆಗಳು ರಹಸ್ಯವಾಗಿದ್ದು, ಯಾವುದೇ ಕಾರಣಕ್ಕೂ ಅದನ್ನು ಹೊರಗೆ ಬಹಿರಂಗ ಮಾಡುವಂತಿಲ್ಲ. ಒಂದು ವೇಳೆ ಯಾವುದೇ  ಮೂಲದಿಂದಾದಲೂ ಸರಿ ಅದು ಬಹಿರಂಗವಾಗಿದ್ದರೆ ಅದು ನಿಜಕ್ಕೂ ಕಾನೂನು ಬಾಹಿರವಾದದ್ದು. ಸಭೆ ವೇಳೆ ನಾನು ಅಮೀರ್ ಖಾನ್ ವಿರುದ್ಧ ದೇಶದ್ರೋಹಿ ಎಂಬ ಪದವನ್ನೇ ಬಳಕೆ  ಮಾಡಿಲ್ಲ. ನನ್ನ ಜೀವಿತಾವಧಿಯಲ್ಲಿಯೇ ನನ್ನಿಂದ ಅಮೀರ್ ಖಾನ್ ವಿರುದ್ಧ ಆ ಪದ ಪ್ರಯೋಗ ಬಳಕೆ ಮಾಡಲು ಸಾಧ್ಯವಿಲ್ಲ. ಹೀಗಿರುವಾಗ ಸುದ್ದಿ ಪತ್ರಿಕೆಗಳು ಇಂತಹ ಸುದ್ದಿಗಳನ್ನು  ಪ್ರಕಟಿಸಲು ಹೇಗೆ ಸಾಧ್ಯ” ಎಂದು ತಿವಾರಿ ಪ್ರಶ್ನಿಸಿದ್ದಾರೆ.

“ನಾನೊಬ್ಬ ಜವಾಬ್ದಾರಿಯುತ ಪ್ರಜೆಯಾಗಿದ್ದು, ದೇಶದ್ರೋಹಿಯಂತಹ ಪದಬಳಕೆ ಸಾಧ್ಯವಿಲ್ಲ. ಇಂತಹ ಸುಳ್ಳು ಸುದ್ದಿಗಳನ್ನು ಪ್ರಕಟಿಸುವ ಮೂಲಕ ದಿನಪತ್ರಿಕೆ ನನ್ನ ಘನತೆಗೆ ಧಕ್ಕೆ  ತರುವಂತಹ ಪ್ರಯತ್ನ ಮಾಡಿದೆ. ಹೀಗಾಗಿ ಪತ್ರಿಕೆ ವಿರುದ್ಧ ನಾನು ನೋಟಿಸ್ ನೀಡಲು ಮುಂದಾಗಿದ್ದೇನೆ. ಕೂಡಲೇ ದಿನಪತ್ರಿಕೆ ಕ್ಷಮೆಯಾಚಿಸಬೇಕು. ಅಲ್ಲದೆ ತನಗೆ ಈ ಸುಳ್ಳು ಸುದ್ದಿ  ನೀಡಿದ ಮೂಲದ ಹೆಸರನ್ನು ಕೂಡ ನಮೂದಿಸಬೇಕು” ಎಂದು ತಿವಾರಿ ಆಗ್ರಹಿಸಿದ್ದಾರೆ.

ಇನ್ ಕ್ರೆಡಿಬಲ್ ಇಂಡಿಯಾದ ಪ್ರಚಾರ ರಾಯಭಾರಿ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳಲು ಶುಕ್ರವಾರ ಕರೆಯಲಾಗಿದ್ದ ಸಂಸದೀಯ ಸ್ಥಾಯಿ ಸಮಿತಿಯ ಸಭೆಯಲ್ಲಿ  ಮನೋಜ್ ತಿವಾರಿ ಕೂಡ ಪಾಲ್ಗೊಂಡಿದ್ದರು. ಈ ವೇಳೆ ಅಮೀರ್ ಖಾನ್ ರನ್ನು ಬದಲಿಸುವ ಬಗ್ಗೆ ಮತ್ತು ಅವರ ಸ್ಥಾನಕ್ಕೆ ಬೇರೊಬ್ಬ ಪ್ರಚಾರ ರಾಯಭಾರಿ ನೇಮಕ ಮಾಡುವ ಕುರಿತು  ಚರ್ಚೆ ನಡೆಸಲಾಗಿತ್ತು. ಈ ಬಗ್ಗೆ ವರದಿ ಮಾಡಿದ್ದ ಎರಡು ರಾಷ್ಟ್ರೀಯ ದಿನಪತ್ರಿಕೆಗಳು ಸಭೆಯಲ್ಲಿ ಮನೋಜ್ ತಿವಾರಿ ಅವರು ಅಮೀರ್ ಖಾನ್ ರನ್ನು ದೇಶದ್ರೋಹಿಯಾಗಿದ್ದು, ಈ  ಕೂಡಲೇ ಅವರನ್ನು ಇನ್ ಕ್ರೆಡಿಬಲ್ ಇಂಡಿಯಾ ಅಭಿಯಾನದಿಂದ ಕಿತ್ತೆಸೆಯುವಂತೆ ಆಗ್ರಹಿಸಿದ್ದರು ಎಂದು ವರದಿ ಮಾಡಿದ್ದವು ಎಂದು ಹೇಳಲಾಗುತ್ತಿತ್ತು.

Write A Comment