ಪೇಶಾವರ: ಭಾರತೀಯ ಯುವತಿಗೂ – ಪಾಕಿಸ್ತಾನದ ಯುವಕನಿಗೂ ಫೇಸ್‌ಬುಕ್ ಮೂಲಕ ಪರಿಚಯವಾಗಿದೆ. ಪರಿಚಯ ಪ್ರೇಮವಾಗಿ ಈಗ ಅವರಿಬ್ಬರು ಮದುವೆಯಾಗಿದ್ದಾರೆ.
ಭಾರತೀಯ ಯುವತಿ ಮೆಹರುನ್ನಿಸಾ – ಪಾಕಿಸ್ತಾನದ ಇಯಾಜ್ ಖಾನ್ ವಿವಾಹಿತರು. ಇವರಿಬ್ಬರು ಫೇಸ್ ಬುಕ್ ಮೂಲಕ ಪರಿಚಯವಾಗಿ ಪರಸ್ಪರ ಪ್ರೀತಿಸಿದ್ದರು. ಅಂತೆಯೇ ಮೆಹರುನ್ನಿಸಾ ಎರಡು ತಿಂಗಳ ಹಿಂದೆ ಇಯಾಜ್ ಖಾನ್ ಅವರನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ಹೋಗಿದ್ದಳು. ಇದೀಗ ಆಕೆಯ ವೀಸಾ ಅವಧಿ ಮುಗಿಯುತ್ತಿದೆ. ವೀಸಾ ಅವಧಿ ಮುಗಿಯುವ 3 ದಿನಗಳಿಗೆ ಮುನ್ನ ಅಂದ್ರೆ ಜನವರಿ 10 ರಂದು ಮೆಹರುನ್ನಿಸಾ ಇಯಾಜ್‌ನನ್ನು ಮದುವೆಯಾಗಿದ್ದಾಳೆ.
ಇಯಾಜ್‌ನನ್ನು ಪ್ರೀತಿಸುತ್ತಿದ್ದ ತಾನು ಸ್ವಇಚ್ಛೆಯಿಂದಲೇ ಪಾಕಿಸ್ತಾನಕ್ಕೆ ಬಂದು ಆತನನ್ನು ಮದುವೆಯಾಗಿದ್ದೇನೆ. ಈಗ ತಾನು ಭಾರತಕ್ಕೆ ಮರಳಿದರೆ ಪಾಕ್ ವಿರೋಧಿ ಸಂಘಟನೆಗಳಿಂದ ಪ್ರಾಣ ಬೆದರಿಕೆ ಬರುವ ಸಂಭವವಿದೆ ಎಂದು ಮೆಹರುನ್ನಿಸಾ ಆತಂಕ ವ್ಯಕ್ತಪಡಿಸಿದ್ದಾಳೆ.
ಅಂತೆಯೇ ತನ್ನ ವೀಸಾ ಅವಧಿ ವಿಸ್ತರಿಸಬೇಕೆಂದು, ಇಯಾಜ್ ಜೊತೆ ಪಾಕ್‌ನಲ್ಲಿ ಜೀವಿಸಲು ಅವಕಾಶ ನೀಡಬೇಕೆಂದು ಮೆಹರುನ್ನಿಸಾ ಪಾಕ್ ಸರ್ಕಾರಕ್ಕೆ ಮನವಿ ಮಾಡಿದ್ದಾಳೆ. ಆದರೆ ಮೂಲಗಳ ಪ್ರಕಾರ ಮೆಹರುನ್ನಿಸಾ ಮನವಿಗೆ ಪಾಕ್ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಎನ್ನಲಾಗಿದೆ.
ಇನ್ನೊಂದೆಡೆ, ಅಮೆರಿಕಾದ ಯುವತಿಯೋರ್ವಳು ಪಾಕಿಸ್ತಾನಿ ಯುವಕನನ್ನು ಮದುವೆಯಾದ ಬಗ್ಗೆ ವರದಿಯಾಗಿದೆ. ಅಮೆರಿಕಾದ ಯುವತಿಗೂ ಪಾಕ್ ಯುವಕನಿಗೂ ಫೇಸ್‌ಬುಕ್ ಕೊಂಡಿಯಾಗಿದೆ.
ಲಾಸ್ ವೇಗಸ್‌ನ ಅರ್ಮೇನೊ ಶರಿಯೋ ಅಂಜ್ಲಿ, ಪಾಕಿಸ್ತಾನದ ಶಾಂಗ್ಲಾ ಜಿಲ್ಲೆಯ ಲಿಲೋನೈ ಮೂಲದ 25 ವರ್ಷದ ತಸೀರುಲ್ಲಾ ಎಂಬುವನನ್ನು ವಿವಾಹವಾಗಿದ್ದಾಳೆ. ತಸೀರುಲ್ಲಾನನ್ನು ಮದುವೆಯಾಗುವ ಮುನ್ನ ಅರ್ಮೇನೋ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾಳೆ.
ತಸೀರುಲ್ಲಾನನ್ನು ಮದುವೆಯಾಗಿರುವುದು, ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿರುವುದು ತಮ್ಮ ಜೀವನದ ಅತ್ಯುತ್ತಮ ಕ್ಷಣ ಅಂತಾ ಅರ್ಮೇನೋ ಹೇಳಿಕೊಂಡಿದ್ದಾಳೆ.