ನವದೆಹಲಿ: ಪಠಾಣ್ ಕೋಟ್ ವಾಯುನೆಲೆ ಮೇಲೆ ದಾಳಿ ಮಾಡಿದ ಉಗ್ರರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಪಾಕಿಸ್ತಾನಕ್ಕೆ ಭಾರತ ಒತ್ತಾಯಿಸುತ್ತಿರುವ ಸಂದರ್ಭದಲ್ಲಿ ನಿಗದಿಯಾಗಿದ್ದ ಎರಡೂ ದೇಶಗಳ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆ ನಡೆಯುವ ಅನಿಶ್ಚಿತತೆ ನಡುವೆ ಮಂಗಳವಾರ ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಪಾಕಿಸ್ತಾನಕ್ಕೆ ಇನ್ನಷ್ಟು ಕಾಲಾವಕಾಶ ನೀಡಬೇಕು ಎಂದು ಹೇಳಿದ್ದಾರೆ.
ತಾವು ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಪಾಕಿಸ್ತಾನ ಸರ್ಕಾರ ಭರವಸೆ ನೀಡಿರುವುದರಿಂದ ಸದ್ಯಕ್ಕೆ ನಾವು ಸಂಶಯಪಡಲು ಯಾವುದೇ ಕಾರಣಗಳಿಲ್ಲ. ನಾವು ಕಾಯಬೇಕಾಗಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಉಗ್ರರ ವಿರುದ್ಧ ನಾವು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಪಾಕಿಸ್ತಾನ ನಮಗೆ ಭರವಸೆ ನೀಡಿದೆ. ಹಾಗಾಗಿ ನಾವು ಸ್ವಲ್ಪ ಸಮಯ ಕಾದು ನೋಡೋಣ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಇದೇ 15ರಂದು ಭಾರತ-ಪಾಕ್ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆ ನಿಗದಿಯಾಗಿದೆ. ಭಾರತ ಇದರಲ್ಲಿ ಭಾಗವಹಿಸುತ್ತದೆಯೇ ಎಂದು ಇನ್ನೂ ದೃಢಪಡಿಸಿಲ್ಲ. ಆದರೆ ಮಾತುಕತೆಯನ್ನು ಹಿಂತೆಗೆದುಕೊಂಡಿಲ್ಲ. ಆದರೆ ಪಠಾಣ್ ಕೋಟ್ ತನಿಖೆಯನ್ನು ಪಾಕಿಸ್ತಾನ ಸರ್ಕಾರ ಕೈಗೊಳ್ಳದಿದ್ದರೆ ಮಾತುಕತೆ ಮುಂದುವರಿಯುವುದು ಅಸಾಧ್ಯ ಎಂದು ಮೂಲಗಳಿಂದ ತಿಳಿದುಬಂದಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ದಿಢೀರನೆ ಲಾಹೋರ್ ಗೆ ಭೇಟಿ ನೀಡಿ ಅಲ್ಲಿನ ಪ್ರಧಾನಿ ನವಾಜ್ ಷರೀಫ್ ಅವರನ್ನು ಭೇಟಿ ಮಾಡಿದ ಒಂದು ವಾರದ ಬಳಿಕ ಪಠಾಣ್ ಕೋಟ್ ವಾಯುನೆಲೆ ಮೇಲೆ ದಾಳಿ ನಡೆದಿತ್ತು.